ಶಿರಸಿ :ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡುವ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಿನೇಶ್ ವಸಂತ ಹೆಗಡೆ ಆಯ್ಕೆಯಾಗಿದ್ದಾರೆ. ಹಂಟ್ಸಿವಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ್ ಅವರು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅಥ್‌ರ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ ಅನುದಾನದಲ್ಲಿ ನಾಸಾ ‘ಫ್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯಲ್ಲಿ 1,35,000 ಅಮೆರಿಕನ್ ಡಾಲರ್(1.42 ಕೋಟಿ) ಅನ್ನು ಸ್ಟೈಫಂಡ್, ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ಮತ್ತು ಸಂಶೋಧನೆ ಮುಂದುವರಿಸಲು ನೀಡಲಾಗುವುದು ಎಂದು ವಿಶ್ವವಿದ್ಯಾನಿಯಲದ ಅಧಿಕೃತ ವೆಬ್‌ಸೈಟ್ ತನ್ನ ನ್ಯೂಸ್‌ಲೆಟರ್‌ನಲ್ಲಿ ತಿಳಿಸಿದೆ.
ಎರಡನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಹೆಗಡೆ, ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಮತ್ತು ಯುಎಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್‌ನಲ್ಲಿ ಪದವಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಹ್ಯಾಕಾಶ ಹವಾಮಾನದ ಕುರಿತು ತಮ್ಮ ಸಂಶೋಧನೆ ಮುಂದುವರಿಸಲು ಈ ಅನುದಾನವನ್ನು ನೀಡಲಾಗಿದೆ.
ಹೆಗಡೆಯವರ ಸಂಶೋಧನಾ ಪ್ರಸ್ತಾವನೆ, ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ ಎಂದಾಗಿರುತ್ತದೆ. ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಮತ್ತು ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕರಾದ ಡಾ.ನಿಕೊಲಾಯ್ ಪೊಗೊರೆಲೋವ್ ಇವರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಶಿಗುಳಿ ಗ್ರಾಮದ ದಿನೇಶ್ ವಸಂತ ಹೆಗಡೆ, ನಾಸಾ ಗುರುತಿಸಿರುವ ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ. ಇವರು ಕ್ರಮವಾಗಿ ವಾಜಗದ್ದೆ ಮತ್ತು ಹಾರ್ಸಿಕಟ್ಟಾದಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಯನ ಮಾಡಿರುತ್ತಾರೆ.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ತನ್ನ ಬಿಎಸ್ಸಿ ಪದವಿ ಮುಗಿಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತ್ತಶಾಸ್ತ್ರ ಎಂಎಸ್ಸಿ ಪದವಿ ಗಳಿಸಿ, ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಾಗೆ ಹಾರಿದ ದಿನೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪತಾಕೆ ಹಾರಿಸಿದ್ದಾರೆ.