ಶಿರಸಿ : ರಾಜ್ಯದಲ್ಲಿ ಜಿಲ್ಲೆಗಳ ವಿಭಜನೆ ಪ್ರಕ್ರಿಯೆ, ಕೂಗು ಬಹುವಾಗಿ ಚಾಲ್ತಿಯಲ್ಲಿದೆ. ಬಳ್ಳಾರಿ ಜಿಲ್ಲೆ ವಿಭಜನೆ ಚಾಲ್ತಿಯಲ್ಲಿದ್ದರೇ, ಜಮಖಂಡಿ, ಮಧುಗಿರಿ ಸೇರಿದಂತೆ ವಿವಿಧ ಜಿಲ್ಲೆ ರಚನೆ ಕೂಗು ಕೇಳಿ ಬಂದಿದೆ. ಆದರೆ ಈ ಎಲ್ಲಾ ಜಿಲ್ಲೆಗಳ ಪ್ರಸ್ತಾವನೆಗಿಂತ ಮೊದಲಿನಿಂದಲೂ ಕೇಳಿ ಬಂದಿರುವ ಶಿರಸಿ ಜಿಲ್ಲೆ ರಚನೆ ಕೂಗು ಮಾತ್ರ ರಾಜ್ಯ ಮಟ್ಟದಲ್ಲಿ ಕೇಳದಿರುವುದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿರಸಿ ಜಿಲ್ಲೆ ರಚನೆಗೆ ಹೆಚ್ಚಿದ ಕೂಗು ಕಳೆದ ಮೂರ್ನಾಲ್ಕು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗವನ್ನಾಗಿ ಮಾಡಿ 6 ತಾಲೂಕುಗಳನ್ನೊಳಗೊಂಡ ಶಿರಸಿ ಜಿಲ್ಲೆ ರಚನೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಅದಕ್ಕಾಗಿ ಒಂದು ಹೋರಾಟ ಸಮಿತಿಯನ್ನೂ ರಚನೆ ಮಾಡಲಾಗಿದೆ. ಆದರೆ, ಉಳಿದ ಜಿಲ್ಲೆಗಳ ಹೋರಾಟಕ್ಕೆ ಗಮನಿಸಿದಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕರಾವಳಿ ಭಾಗವನ್ನು ಹೊರತು ಪಡಿಸಿ ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ, ಹಳಿಯಾಳ ಹಾಗೂ ಜೊಯೀಡಾ ತಾಲೂಕುಗಳನ್ನು ಸೇರಿ 3 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಶಿರಸಿ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಪ್ರಸ್ತಾವ ಇಡಲಾಗಿತ್ತು. ಆದರೆ, ಇದಕ್ಕೆ ಸರ್ಕಾರಿ ವಲಯದಿಂದ ನಿರೀಕ್ಷಿತ ಬೆಂಬಲವೇ ದೊರಕಿರಲಿಲ್ಲ. ನಂತರ ಹೋರಾಟಗಾರರ ಕಿಚ್ಚು ಕಡಿಮೆಯಾಗುತ್ತಾ ಬಂದು ಸದ್ದೆ ಇಲ್ಲದಂತಾಗಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರದಲ್ಲಿ ಬಳ್ಳಾರಿ ವಿಭಜಿಸಿ ಎರಡು ಜಿಲ್ಲೆ ಮಾಡಲು ಮುಖ್ಯಮಂತ್ರಿಗಳು ಆಸಕ್ತಿ ತೋರುತ್ತಿದ್ದಂತೆ, ಶಿರಸಿ ಜಿಲ್ಲೆ ರಚನೆ ಮುನ್ನೆಲೆಗೆ ಬಂದಿದ್ದು, ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಜಿಲ್ಲೆ ಬೇಕು !:ಉತ್ತರ ಕನ್ನಡ ಜಿಲ್ಲೆ ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಕಾಡು ಮೇಡುಗಳಿಂದ ತುಂಬಿಕೊಂಡು ದೊಡ್ಡ ವಿಸ್ತೀರ್ಣತೆ ಹೊಂದಿದೆ. ಒಟ್ಟು 11 ತಾಲೂಕುಗಳಿದ್ದು, ಕಾರವಾರ ಜಿಲ್ಲಾ ಕೇಂದ್ರವಾಗಿದೆ. ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎಂದು ಜಿಲ್ಲೆಯನ್ನು ವಿಂಗಡನೆ ಮಾಡಲಾಗಿದ್ದು, ಘಟ್ಟದ ಮೇಲಿನ ಶಿರಸಿ ಜಿಲ್ಲೆ ವ್ಯಾಪ್ತಿಗೆ ಬರುವ ತಾಲೂಕುಗಳಿಗೆ ಜಿಲ್ಲಾ ಕೇಂದ್ರ 100 ಕಿ.ಮಿ. ಅಧಿಕ ದೂರವಾಗುತ್ತದೆ. ಇದರಿಂದ ನಿತ್ಯದ ವ್ಯವಹಾರಗಳಿಗೆ ಸಾಕಷ್ಟು ತೊಡಕಾಗುತ್ತಿದ್ದು, ಅಧಿಕಾರಿಗಳಿಗೂ ಸಹ ಓಡಾಟ ಹೊರೆಯಾಗಿದೆ. ಇದರಿಂದ ಶಿರಸಿ ಜಿಲ್ಲೆ ರಚನೆ ಮಾಡಿ ಶಿರಸಿ ತಾಲೂಕಲ್ಲಿ ಜಿಲ್ಲಾ ಕೇಂದ್ರ ಮಾಡಿದರೆ ಎಲ್ಲಾ ಘಟ್ಟದ ಮೇಲಿನ ತಾಲೂಕುಗಳಿಗೆ ಅನುಕೂಲವಾಗಲಿದೆ ಎನ್ನುವುದು ಜನರ ಆಶಯವಾಗಿದೆ.
ಒತ್ತಡ ಅನಿವಾರ್ಯ ! :ಶಿರಸಿ ಜಿಲ್ಲೆ ರಚನೆಗೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕಿಂಚಿತ್ತೂ ತಲೆ ಕೆಡಿಸಿಕೊಂಡಂತಿಲ್ಲ. ಇದಕ್ಕೆ ಹೋರಾಟ ಸಮಿತಿಯ ನಿಷ್ಕ್ರಿಯತೆ ಕಾರಣ ಎನ್ನುತ್ತಾರೆ ಸ್ಥಳೀಯ ನಾಗರಿಕರು. ಆದರೆ, ಕಳೆದೆರಡು ವರ್ಷಗಳ ಹಿಂದೆ ಹೋರಾಟ ಸಮಿತಿ ಲಾಂಛನ ಬಿಡುಗಡೆ ಮಾಡಿ ಸುದ್ದಿಯಾಗಿತ್ತು. ನಂತರ ಯಾವುದೇ ಸ್ಪಷ್ಟತೆ ಕಾಣಲಿಲ್ಲ. ಇದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಅನಿವಾರ್ಯತೆಯಿದ್ದು, ಜಿಲ್ಲೆಯ ಅಗತ್ಯತೆಗಳನ್ನು ಅವರಿಗೆ ತಿಳಿಸಬೇಕಾಗಿದೆ.