ಕಾರವಾರ: ಇಷ್ಟು ವರ್ಷ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದ ಗಣೇಶ ಚತುರ್ಥಿ ಹಬ್ಬ ಕಾರವಾರದಲ್ಲಿ ಕಳೆಗುಂದಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ಕೊರೊನಾ ಹಿನ್ನಲೆಯಲ್ಲಿ ಸರಕಾರ ಹೇರಿದ್ದ ಷರತ್ತು ಬದ್ಧ ಮಾರ್ಗಸೂಚಿ ಹಬ್ಬದ ಸಂಭ್ರಮ ಕಸಿದುಕೊಂಡಿದೆ. ಮಾತ್ರವಲ್ಲದೇ ಆರ್ಥಿಕತೆಯ ಮೇಲೂ ಕೊರೊನಾ ಕರಿನೆರಳು ಬಿದ್ದು ಸರಳ ಹಬ್ಬಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಇನ್ನುಳಿದ ತಾಲೂಕಿನಲ್ಲಿ ಈ ಬಾರಿಯ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆದುಕೊಂಡಿದೆ. ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಸರಕಾರ ಷರತ್ತು ಬದ್ಧ ಆಚರಣೆ ಮಾಡಲು ಮಾರ್ಗಸೂಚಿ ಹೊರಡಿಸಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಹಬ್ಬ ಆಚರಣೆ ಮಾಡಲು ಜನ ಮುಂದಾಗಿದ್ದು ಕಂಡು ಬಂತು.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಳೆದ ವರ್ಷದ ಹಾಗೆ ಯಾವುದೇ ಸಂಭ್ರಮ ಸಡಗರ ಇಲ್ಲದೇ ಚಿಕ್ಕದಾದ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ. ಈ ಹಿಂದಿನ ಎಲ್ಲ ವರ್ಷ 10-12 ಅಡಿ ಎತ್ತರದ ದೊಡ್ಡದಾದ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತಿದ್ದವರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹಬ್ಬ ಆಚರಿಸಿದ್ದಾರೆ. ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಗಣೇಶ ಹಬ್ಬದ ಸಂಭ್ರಮ ಕೂಡಾ ಮಾಯವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.