ಕರ್ನಾಟಕ

karnataka

ETV Bharat / state

ಬಂದರುಗಳಲ್ಲಿ ತುಂಬಿಕೊಂಡ ಹೂಳು : ಹಣ ಬಿಡುಗಡೆಯಾದರೂ ಅಡ್ಡಿಯಾದ ಸಿಆರ್​ಜೆಡ್ ನಿಯಮ! - ಹವಾಮಾನ ವೈಪರೀತ್ಯ

ಕಾರವಾರದ ಬೈತಖೋಲ್ ಬಂದರಿನಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ ಇಲ್ಲಿನ ಮೀನುಗಾರರು ಆದಷ್ಟು ಬೇಗ ಹೂಳು ತೆಗೆಸಿ ಎಂದು ಒತ್ತಾಯಿಸಿದ್ದಾರೆ.

ಬಂದರುಗಳಲ್ಲಿ ತುಂಬಿಕೊಂಡ ಹೂಳು
ಬಂದರುಗಳಲ್ಲಿ ತುಂಬಿಕೊಂಡ ಹೂಳು

By ETV Bharat Karnataka Team

Published : Nov 16, 2023, 4:54 PM IST

ಮೀನುಗಾರರ ಮುಖಂಡ ರಾಜು ತಾಂಡೇಲ

ಕಾರವಾರ (ಉತ್ತರ ಕನ್ನಡ) : ಉತ್ತರಕನ್ನಡದ ಬಂದರುಗಳಲ್ಲಿ ಹೂಳಿನ ಸಮಸ್ಯೆ ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಆದಾಯ ಹರಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಮೀನುಗಾರರ ಒತ್ತಾಯಕ್ಕೆ ಮಣಿದು ಒಂದಿಷ್ಟು ಹಣ ಬಿಡುಗಡೆಯಾಗಿದ್ದರೂ ಕೂಡ ಸಿಆರ್‌ಜೆಡ್ ನಿಯಮಗಳು ಅಡ್ಡಿಯಾಗಿದ್ದು, ಪರಿಣಾಮ ದಶಕಗಳಿಂದ ತುಂಬಿಕೊಂಡ ಹೂಳು ಬೋಟುಗಳು, ಲಂಗರಿಗೂ ಪರದಾಡಬೇಕಾಗಿದೆ.

ಕಾರವಾರದ ಬೈತಖೋಲ್ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರಾಗಿದ್ದು, ಸುಮಾರು 200ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ಈ ಬಂದರಿನಲ್ಲಿ ನಿಲ್ಲುತ್ತವೆ. ಪ್ರತಿನಿತ್ಯ ಮೀನುಗಾರಿಕೆಗೆ ತೆರಳುವ ಬೋಟುಗಳು ವಾಪಸ್​ ಇದೇ ಬಂದರಿನಿಂದಲೇ ತಮ್ಮ ವ್ಯಾಪಾರ ವಹಿವಾಟನ್ನು ನಡೆಸುತ್ತವೆ. ಆದರೆ, ಬಂದರಿನ ಬಳಿ ತುಂಬಿಕೊಂಡಿರುವ ಹೂಳನ್ನ ತೆಗೆಸದೇ ಇರುವ ಪರಿಣಾಮ ಬೋಟುಗಳು ಹಾನಿಗೊಳಗಾಗುವಂತಾಗಿದೆ.

ಹವಾಮಾನ ವೈಪರೀತ್ಯದಂತಹ ಪರಿಸ್ಥಿತಿಗಳಲ್ಲಿ ಕಾರವಾರ ಮಾತ್ರವಲ್ಲದೇ ಮಲ್ಪೆ, ಉಡುಪಿ, ಗೋವಾ, ಕೇರಳ ಸೇರಿದಂತೆ ಹೊರರಾಜ್ಯಗಳ ಬೋಟುಗಳು ಸಹ ಬೈತಖೋಲ ಬಂದರಿಗೆ ಆಶ್ರಯಕ್ಕಾಗಿ ಆಗಮಿಸುತ್ತವೆ. ಆದರೆ, ಬಂದರು ಸಣ್ಣದಾಗಿರುವ ಪರಿಣಾಮ ಸಮುದ್ರದಲ್ಲೇ ಬೋಟುಗಳು ಲಂಗರು ಹಾಕಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆದಷ್ಟು ಬೇಗ ಹೂಳನ್ನ ತೆಗೆಸಬೇಕು ಅನ್ನೋದು ಮೀನುಗಾರರ ಬೇಡಿಕೆಯಾಗಿದೆ.

ಬೈತಖೋಲ್ ಬಂದರಿನಲ್ಲಿ 100ಕ್ಕೂ ಅಧಿಕ ಪರ್ಶಿಯನ್​ ಬೋಟುಗಳಿದ್ದು, ಆಳಸಮುದ್ರದ ಮೀನುಗಾರಿಕೆ ನಡೆಸುತ್ತವೆ. ಬೋಟುಗಳಲ್ಲಿ ಹಿಡಿದು ತರುವ ಮೀನುಗಳನ್ನ ಪ್ರತಿನಿತ್ಯ ಇಲ್ಲಿನ ಬಂದರಿನಿಂದ ಗೋವಾ, ಕೇರಳ ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯಗಳಿಗೆ ಮೀನುಗಳನ್ನು ಕಳುಹಿಸಲಾಗುತ್ತದೆ. 60ಕ್ಕೂ ಅಧಿಕ ಸಣ್ಣ ಬೋಟುಗಳು ಸಹ ಇದೇ ಬಂದರಿನಿಂದ ಕಾರ್ಯನಿರ್ವಹಿಸುತ್ತಿದ್ದು, ಮಾರುಕಟ್ಟೆಗೆ ಮೀನುಗಳನ್ನು ಪೂರೈಸುತ್ತವೆ. ಇನ್ನು, ಈ ಬಂದರಿನ ಹೂಳೆತ್ತಲು ವಿಧಾನಸಭಾ ಚುನಾವಣೆಯ ಪೂರ್ವ ಬಿಜೆಪಿ ಸರ್ಕಾರದಲ್ಲಿ 3.50 ಕೋಟಿ ರೂ. ಅನುದಾನ ಕೂಡ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿದ್ದು, ಕೆಲಸ ಆರಂಭವಾಗಬೇಕಷ್ಟೆ. ಆದರೆ ಈಗ ಸಿಆರ್​ಜೆಡ್ ನಿಯಮಾವಳಿಯಿಂದಾಗಿ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಿದ್ದಾರೆ ಬಂದರು ಅಧಿಕಾರಿಗಳು.

ಒಟ್ಟಿನಲ್ಲಿ ಕಳೆದ ಒಂದು ದಶಕದಿಂದ ಮೀನುಗಾರರು ಎದುರಿಸುತ್ತಿರುವ ಬಂದರು ಹೂಳಿನ ಸಮಸ್ಯೆಗೆ ಶೀಘ್ರ ಮುಕ್ತಿ ಹಾಡಬೇಕಿದೆ. ಈ ಬಗ್ಗೆ ಬಂದರು ಅಧಿಕಾರಿಗಳು ಆಸಕ್ತಿ ತೋರಿ, ಮೀನುಗಾರರ ಜೀವನಾಧಾರ ಮೀನುಗಾರಿಕೆಗೆ ಮುಕ್ತ ಅವಕಾಶ ಮಾಡಿಕೊಡಬೇಕಿದೆ.

ಇದನ್ನೂ ಓದಿ :ಕೆರೆ ಹೂಳು ತೆಗೆಯಿಸಿ ನಮ್ಮನ್ನು ಬದುಕಿಸಿ : ಬೀಳಗಿ ಗ್ರಾಮಸ್ಥರ ಒತ್ತಾಯ

ABOUT THE AUTHOR

...view details