ಶಿರಸಿ: ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ. ಕನ್ನಡಾಂಬೆ ತಾಯಿ ಭುವನೇಶ್ವರಿಯ ದೇವಾಲಯ ಸಿದ್ದಾಪುರದಲ್ಲಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.
ಕನ್ನಡ ಸಿರಿ ಪಸರಿಸುವ ಭುವನಗಿರಿ:ಈ ಕುರಿತು ಈಟಿವಿ ಭಾರತ ಜತೆಗೆ ಮಾತನಾಡಿದ ಚಿಂತಕರಾದ ಆರ್.ಜಿ.ಪೈ ಅವರು, ಭುವನಗಿರಿ ಭುವನೇಶ್ವರಿ ದೇವಿ ನೆಲೆನಿಂತಿರುವ, ಕನ್ನಡ ಸಾಮ್ರಾಜ್ಯ ಕಟ್ಟಲ್ಪಟ್ಟ ಕನ್ನಡಿಗರ ಕಾಶಿ. ಇದು ಉತ್ತರ ಕನ್ನಡದ ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ 8 ಕಿಲೋಮೀಟರ್ ದೂರವಿರುವ ಭುವನಗಿರಿ ಕನ್ನಡಿಗರ ಸಿರಿಯನ್ನು ಹೊತ್ತು ನಿಂತ ನೆಲ. ಆದರೆ ಸರ್ಕಾರಗಳು ಈವರೆಗೂ ಯಾವುದೇ ಉತ್ಸವ ಆಚರಿಸದಿರುವುದು ವಿಷಾದಕರ. ರಾಜ್ಯೋತ್ಸವ ಪ್ರಶಸ್ತಿ ಸೇರಿ ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇವಾಲಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಭುವನಗಿರಿಯಲ್ಲಿ ನೆಲೆಸಿದ ಭುವನೇಶ್ವರಿ ದೇವಿ ಕ್ರಿ.ಶ. 1600ರ ಇತಿಹಾಸ:ಅರ್ಚಕ ಶ್ರೀಧರ ಭಟ್ ಪ್ರತಿಕ್ರಿಯಿಸಿ, ಮೂರು ಶತಮಾನದ ಮೊದಲೇ ಬೀಳಗಿಯ ಅರಸರು ತಾಯಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಿಸಿ ಕನ್ನಡತಿಯ ತೇರು ಎಳೆದಿದ್ದರು. ತಾಯ್ನುಡಿಯ ಪೂಜೆಗೆ ಅಧಿಕೃತ ಮುನ್ನುಡಿ ಬರೆದಿದ್ದರು. ವಿಜಯನಗರದ ಅರಸರು ಸಹ ಮಾತೆಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯ ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹ ಕಾಣಬಹುದು. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಹದಿನೇಳನೆಯ ಶತಮಾನದವರೆಗಿನ ದಾಖಲೆಗಳು ಲಭ್ಯವಿಲ್ಲ. ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎಂದು ತಿಳಿಸಿದರು.
ಶಿರಸಿಯ ಸಂದೇಶ ಭಟ್ ಮಾತನಾಡಿ, ಕನ್ನಡದ ಮೊದಲ ಅರಸ ಪರಂಪರೆಯಾದ ಕದಂಬರು ಈ ದೇವಿಯನ್ನು ಆರಾಧಿಸಿದ್ದರೆಂಬುದಕ್ಕೆ ಭುವನಗಿರಿ ಭುವನೇಶ್ವರೀ ದೇವಿಯ ದೇವಾಲಯವೇ ಸಾಕ್ಷಿ. ಕನ್ನಡಿಗರ ಸ್ವಾಭಿಮಾನದ ಸಂಕೇತ ಭುವನಗಿರಿಯೆಡೆ ಕನ್ನಡಿಗರ ಆಸಕ್ತಿ ಇನ್ನಷ್ಟು ಬೆಳೆಯಬೇಕಿದ್ದು, ಕನ್ನಡ ನಾಡು, ನುಡಿಯ ಸಂಕೇತ ಭುವನಗಿರಿಯನ್ನು ಭುವನೇಶ್ವರಿ ದೇವಿ ದೇಗುಲ ಉತ್ತುಂಗಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗನೂ ಪಣ ತೊಡುವಂತಾಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ:ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ