ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದನ್ನು ಉತ್ತರಕನ್ನಡ ಜಿಲ್ಲಾ ಬಿಜೆಪಿ ಖಂಡಿಸಿದೆ. ಅಲ್ಲದೇ, ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆಯಲು ನಿರ್ಧಿರಿಸಿದೆ.
ಸಭಾಧ್ಯಕ್ಷರಿಗೆ ಏಕವಚನ ಪ್ರಯೋಗಿಸಿದ್ದ ಸಿದ್ದರಾಮಯ್ಯ.. ಬಿಜೆಪಿಯಿಂದ ಗವರ್ನರ್‌ಗೆ ಹಕ್ಕುಚ್ಯುತಿ ಪತ್ರ.. - Karnataka political developments
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದನ್ನು ಉತ್ತರಕನ್ನಡ ಜಿಲ್ಲಾ ಬಿಜೆಪಿ ಖಂಡಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ರವಿ ಹೆಗಡೆ ಹೂವಿನಮನೆ, ಸಿದ್ದರಾಮಯ್ಯ ಕ್ಷಮೆಯಾಚಿಸುವವರೆಗೆ ವಿಧಾನಸಭೆ ಕಾರ್ಯಕಲಾಪದಿಂದ ದೂರ ಇಡಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಪ್ರಜ್ಞೆಯಿಲ್ಲದ ವ್ಯಕ್ತಿ ಸಿದ್ದರಾಮಯ್ಯ. ಕಾಗೇರಿ ಬಗ್ಗೆ ಏಕವಚನ ಹಾಗೂ ಅಗೌರವದಿಂದ ವರ್ತಿಸಿದ್ದು ಸರಿಯಲ್ಲ. ಈ ಕೂಡಲೇ ಕ್ಷಮೆ ಕೋರಬೇಕು. ಕಾಗೇರಿ ಬಗ್ಗೆ ಆಡಿದ ಮಾತನ್ನು ಸಿದ್ದರಾಮಯ್ಯ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಏಕವಚನದ ಪ್ರವೃತ್ತಿ ಅವರ ನಾಲಿಗೆ ಮೇಲಿನ ಹಿಡಿತ ತೋರುತ್ತದೆ. ಕಾಂಗ್ರೆಸ್ಸಿಗರಿಗೆ ಸಾಂವಿಧಾನಿಕ ಹುದ್ದೆಯ ಬಗ್ಗೆ ಎಷ್ಟು ಗೌರವವಿದೆ ಎಂಬುದು ಸಿದ್ದರಾಮಯ್ಯ ಮಾತಿನಿಂದಲೇ ಅರ್ಥವಾಗುತ್ತದೆ. ಪ್ರತಿಬಾರಿ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ನವರು ಈಗ ಸಂವಿಧಾನಕ್ಕೆ ಅಪಚಾರ ಮಾಡಿದಾರೆ. ಇದು ಕ್ಷಮಿಸುವ ವಿಚಾರವಲ್ಲ ಎಂದರು. ಸಿದ್ದರಾಮಯ್ಯ ವಿರುದ್ಧ ಹಕ್ಕುಚ್ಯುತಿ ತೆಗೆದುಕೊಳ್ಳಲು ರಾಜ್ಯಪಾಲರಿಗೆ ಪತ್ರ ಬರೆಯಲಾಗುತ್ತದೆ ಎಂದರು. ಸ್ಪೀಕರ್ ಅವರು ಸ್ವತಂತ್ರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.