ಶಿರಸಿ: ಫ್ರಾನ್ಸ್ನ ನಾರ್ಮಂಡಿಲ್ಲಿ ನಡೆದ 19ನೇ ಆವೃತ್ತಿಯ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ 70 ದೇಶಗಳ 3,500 ಕ್ರೀಡಾಪಟುಗಳು ಭಾಗವಹಿಸಿದ್ದರು. ಶಿರಸಿ ಲಯನ್ಸ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಪ್ರೇರಣಾ ನಂದಕುಮಾರ್ ಶೇಟ್ ಬ್ಯಾಡ್ಮಿಂಟನ್‌ನಲ್ಲಿ ಬಂಗಾರದ ಪದಕ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಳೆ. ರಾಷ್ಟ್ರವೇ ಹೆಮ್ಮೆ ಪಡುವ ಸಾಧನೆ ಮಾಡಿದ ಪ್ರೇರಣಾ ಅವರನ್ನು ತವರೂರು ಶಿರಸಿಯಲ್ಲಿ ಸೋಮವಾರ ತೆರೆದ ಜೀಪ್ನಲ್ಲಿ ಮೆರವಣಿಗೆ ಮಾಡಿ ಅದ್ದೂರಿ ಸ್ವಾಗತ ಕೋರಲಾಯಿತು.
ಬಳಿಕ ನಗರದ ಲಯನ್ಸ್ ಸಭಾಂಗಣದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ದೇಶದ ಹಾಗೂ ಶಿರಸಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಪ್ರೇರಣಾಳ ಸಾಧನೆ ನಿಜಕ್ಕೂ ಶ್ಲಾಘನೀಯ. ಸರ್ಕಾರದಿಂದ 2 ಲಕ್ಷ ರೂ ನೀಡಲಾಗುವುದು. ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.