ಶಿರಸಿ (ಉ.ಕ): ಗೆದ್ದಲು, ಬೆಂಕಿ, ಬಿಸಿಲಿಗೂ ಜಗ್ಗದೆ ನೂರಾರು ವರ್ಷ ಬಾಳುವ ‘ಜಾಲ’ದ ಮರಗಳು ( shorea talura ) ಅಳಿವಿನ ಅಂಚಿಗೆ ತಲುಪಿವೆ. ತಾಲೂಕಿನ ಗೋಳಿಕೊಪ್ಪ ಗ್ರಾಮದ ಸೊಪ್ಪಿನ ಬೆಟ್ಟದಲ್ಲಿರುವ ನೂರಾರು ಜಾಲದ ಮರಗಳು ಏಕಾಏಕಿ ಒಣಗುತ್ತಿದ್ದು, ಗಟ್ಟಿತನದ ಜಾಲದ ಮರಗಳು ಹಸಿರು ಮೈ ಕಳಚಿಕೊಂಡು ಬೋಳಾಗುತ್ತಿವೆ. ಇದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಶಿರಸಿಯ ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕೊಪ್ಪ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿರುವ ಜಾಲದ ಮರಗಳು ಕಳೆದ ಒಂದು ವರ್ಷದಿಂದ ಒಂದೊಂದಾಗಿ ಸಾವನ್ನಪ್ಪುತ್ತಿದ್ದು, ಗೆದ್ದಲೂ ತಿನ್ನಲು ಸಾಧ್ಯವಾಗದಷ್ಟು ಗಟ್ಟಿಯಾದ ಮರಗಳು ಒಣಗಿ ಸಾಯುತ್ತಿವೆ.
ಗೋಳಿಕೊಪ್ಪದಲ್ಲಿ ಅಡಿಕೆ ತೋಟಕ್ಕಾಗಿ ಬಿಟ್ಟಿರುವ ಅಂದಾಜು 200 ಎಕರೆ ಸೊಪ್ಪಿನ ಬೆಟ್ಟದಲ್ಲಿ ಸಾವಿರಾರು ಜಾಲದ ಮರಗಳಿದ್ದು, ಅದರಲ್ಲಿ ಈಗಾಗಲೇ ನೂರಾರು ಮರಗಳು ಸಾವನ್ನಪ್ಪಿವೆ. ಹಸಿರಾಗಿ ಹರಡಿದ್ದ ಮರಗಳು ಒಮ್ಮೆಲೇ ಬರಿದಾಗಿ ಸಾಯುತ್ತಿದ್ದು, ಕೆಲವೇ ಕೆಲವು ಮರಗಳು ಮಾತ್ರ ಇನ್ನೂ ಹಸಿರಾಗಿವೆ.
ಹಲವು ವರ್ಷಗಳಿಂದ ಬೇರು ಬಿಟ್ಟಿರುವ ಮರಗಳು ಒಮ್ಮೆಲೇ ಸಾಯುತ್ತಿರುವುದು ಅರಣ್ಯ ಇಲಾಖೆಗೂ ತಲೆನೋವಾಗಿದೆ. ಸೊಪ್ಪಿನ ಬೆಟ್ಟ ಇಲಾಖೆಯ ಅಡಿಯಲ್ಲಿಯೇ ಬರುವ ಕಾರಣ ಮರಗಳ ಸಂರಕ್ಷಣೆ ಅವರ ಹೆಗಲೇರಿದೆ. ಕೀಟ ಬಾಧೆಯಿಂದ ಸಾಯುತ್ತಿವೆ ಎಂದು ಪ್ರಾಥಮಿಕವಾಗಿ ಇಲಾಖೆ ಅಂದಾಜಿಸಿದೆ. ಆದರೆ ತನ್ನಿಂದ ತಾನೇ ಚೇತರಿಕೆ ಕಾಣುವ ಶಕ್ತಿ ಜಾಲದ ಮರದಲ್ಲಿದ್ದು, ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.