ಶಿರಸಿ :ರಾಜ್ಯದ ಸಮಗ್ರ ಯೋಜನೆಯ ಬಜೆಟ್ನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಮಾಡಿದ್ದು, ಇದೊಂದು ಸರ್ವವ್ಯಾಪಿ ಬಜೆಟ್ ಆಗಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಕ್ಷೇತ್ರಕ್ಕೆ ಸಹಕಾರಿಯಾದ ಬಜೆಟ್ ಮಂಡಿಸಿದ್ದಾರೆ. 486 ಕೋಟಿ ಹಣವನ್ನು ಈ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರರ ಅಭಿವೃದ್ಧಿ, ಕೈಗಾರಿಕಾ ವಸಾಹತು, ಆಸ್ಪತ್ರೆ ಮೇಲ್ದರ್ಜೆ, ಬಂದರು ವಿಸ್ತರಣೆ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದು, ಸರ್ವ ಸ್ಪರ್ಶಿ ಬಜೆಟ್ ಮಂಡಿಸಿದ್ದಾರೆ ಎಂದರು.
ಶಿರಸಿ ಮಾರಿಕಾಂಬಾ ದೇವಾಲಯದ ಸರ್ವಾಂಗೀಣ ಅಭಿವೃದ್ಧಿ ಸಂಬಂಧ ಆಡಳಿತ ಮಂಡಳಿಯು 200 ಕೋಟಿ ರೂ.ಗಳ ನೀಲನಕ್ಷೆ ಸಿದ್ಧಪಡಿಸಿದ್ದು, ಉತ್ತಮ ಕಾರ್ಯ. ರಾಜ್ಯದ ಧಾರ್ಮಿಕ ಕೇಂದ್ರವಾಗಿ ಮಾರ್ಪಡುತ್ತಿರುವ ಮಾರಿಕಾಂಬಾ ದೇವಾಲಯ ಅಭಿವೃದ್ಧಿ ಸಂಬಂಧ ಮುಜರಾಯಿ ಸಚಿವರ ಜತೆ ಪಕ್ಷಾತೀತವಾಗಿ ಚರ್ಚಿಸಿ ವೈಭವೋಪೇತ ದೇವಾಲಯ ನಿರ್ಮಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಳಿ ಒತ್ತಾಯಿಸಲಾಗುವುದು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಖಾಯಿಲೆಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಒತ್ತಾಯ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಖಾಯಿಲೆಯಿಂದ ಮೃತಪಟ್ಟವರ ಕುಟುಂಬದವರಿಗೆ ಕಳೆದ ವರ್ಷವನ್ನೂ ಒಳಗೊಂಡು ಈ ಬಾರಿಯೂ ಪರಿಹಾರ ನೀಡಲಾಗಿದೆ. ಆದರೆ ಉತ್ತರ ಕನ್ನಡದಲ್ಲಿ ಕಳೆದ ಬಾರಿ 3 ಜನರು, ಪ್ರಸಕ್ತ ವರ್ಷ ಓರ್ವ ಸಾವಿಗೀಡಾಗಿದ್ದಾನೆ. ಆದರೆ ಪರಿಹಾರ ನೀಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದರು.