ಶಿರಸಿ :ಯಾರು ನಮಗೆ ಅಮಾನ್ಯ ಎನ್ನುತ್ತಿದ್ದರೋ ಅವರನ್ನು ಜನರು ಅಮಾನ್ಯ ಮಾಡಿದ್ದಾರೆ. ಆದರೆ ನಮಗೆ ಮಾನ್ಯ ಮಾಡಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ್ ವಿರೋಧ ಪಕ್ಷದವರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳಿಗೆ ಸಚಿವ ಸ್ಥಾನ ನೀಡಬಾರದು ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ನಮನ್ನು ಮಂತ್ರಿ ಮಾಡೋದಿಲ್ಲ ಎಂದು ಹೇಳುವ ಕಾಲ ಇದ್ದಾಗ, ಸಿದ್ದರಾಮಯ್ಯ ಅವರು ಮೋಸ ಮಾಡಿದ್ರು ಮೋಸ ಮಾಡಿದ್ರು ಎನ್ನುತ್ತಿದ್ದರು. ಈಗ ನಮಗೆ ಮಂತ್ರಿಯಾಗುವ ಕಾಲ ಬಂದಿದೆ ಸಿದ್ದರಾಮಯ್ಯ ಅವರು ಬೇಸರ ಮಾಡಿಕೊಳ್ಳೋದು ಬೇಡ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವರಾಮ್ ಹೆಬ್ಬಾರ್ ಫೆ.6 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಅಂದು ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಅಲ್ಲದೆ ಕ್ಷೇತ್ರದಲ್ಲಿ ಕದಂಬೋತ್ಸವ ನಡೆಯಲಿದ್ದು, ಇದು 25ನೇ ವರ್ಷದ ರಜತ ಉತ್ಸವ ಆಗಲಿದೆ. ಆದ ಕಾರಣ ಅದ್ಧೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಚಿವ ಸ್ಥಾನದ ಮಾಹಿತಿಯನ್ನ ಗುಟ್ಟಾಗಿ ಇರಿಸಿಕೊಂಡ ಹೆಬ್ಬಾರ, ಮಂತ್ರಿ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ನನ್ನನ್ನ ಮಂತ್ರಿ ಮಾಡ್ತೇನೆಂದು ಇಷ್ಟರತನಕ ಮುಖ್ಯಮಂತ್ರಿಗಳ ಕಡೆಯಿಂದ ಯಾವುದೇ ಸೂಚನೆ ಬಂದಿಲ್ಲ. ಹೊಸದಾಗಿ ಆಯ್ಕೆಯಾದ ಬಹುತೇಕ ಮಂದಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ.
ಕೆಲವರಿಗೆ ತಾಂತ್ರಿಕ ಕಾರಣದಿಂದ ವಿಳಂಬ ಆಗಬಹುದು. ಎಲ್ಲರೂ ಒಂದು ದಿನ ಕಾದು ನೋಡಿ. ಪಕ್ಷದಲ್ಲಿ ಮೂಲ ಬಿಜೆಪಿ ಹೊಸ ಬಿಜೆಪಿ ಎಂಬುದಿಲ್ಲ. ನಮಗೆ ಒಂದೇ ಮುಖ್ಯಮಂತ್ರಿ, ಓರ್ವ ರಾಷ್ಟ್ರೀಯ ಅಧ್ಯಕ್ಷರು ಎಂದು ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.