ಶಿರಸಿ:ಕೇಂದ್ರ ಚುನಾವಣಾ ಆಯೋಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿದ್ದು, ಅದರಲ್ಲಿ ಹೆಬ್ಬಾರ್ ಪ್ರತಿನಿಧಿಸುವ ಯಲ್ಲಾಪುರ ವಿಧಾನಸಭಾ ಕ್ಷೇತ್ರವೂ ಸಹ ಸೇರಿದೆ. ಇದರಿಂದ ಕಳೆದೆರಡು ದಿನಗಳ ಹಿಂದೆ ಅನರ್ಹರು ಅತಂತ್ರರಲ್ಲ ಎಂಬ ಹೇಳಿಕೆಯನ್ನು ವಿಶ್ವಾಸದಿಂದಲೇ ನೀಡಿದ್ದ ಜಿಲ್ಲೆಯ ಪ್ರಭಾವಿ, ಯಲ್ಲಾಪುರದ ಮಾಜಿ ಶಾಸಕರೂ ಆಗಿರುವ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅವರ ರಾಜಕೀಯ ಜೀವನ ಅತಂತ್ರವಾದಂತೆ ಕಾಣುತ್ತಿದೆ.
ಉಪ ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಅನರ್ಹ ಶಾಸಕರ ಭವಿಷ್ಯದ ಮೇಲೆ ಕರಿ ನೆರಳು ಬಿದ್ದಿದೆ. 17 ಅನರ್ಹ ಶಾಸಕರಲ್ಲಿ 15 ಅನರ್ಹರ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು, ಎರಡು ಬಾರಿ ಶಾಸಕರಾಗಿದ್ದ ಹೆಬ್ಬಾರ್ ಆಸೆಗೂ ತಣ್ಣೀರು ಬಿದ್ದಿದೆ.
ಉಪಚುನಾವಣೆಯಲ್ಲಿ ಪುತ್ರ ಅಭ್ಯರ್ಥಿ ?
ಅನರ್ಹ ಶಾಸಕ ಹೆಬ್ಬಾರ್ ಅವರ ಮಗನನ್ನು ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸುವ ವಿಚಾರ ಇದೆಯೇ ಎಂಬ ಪ್ರಶ್ನೆಗೆ ಅಂತಹ ಯಾವುದೇ ಆಲೋಚನೆಗಳು ಇಲ್ಲ ಎಂದು ಅವರು ಉತ್ತರಿಸಿದರು. ಆದರೀಗ ಚುನಾವಣೆ ಘೋಷಣೆ ಆದ ಪರಿಣಾಮ ಬೇರೆ ದಾರಿ ಇಲ್ಲದೇ ಮಗನನ್ನು ಬಿಜೆಪಿಯಿಂದ ಅಭ್ಯರ್ಥಿ ಮಾಡುತ್ತಾರೆಯೇ ? ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡಿದೆ.
ಕಾರ್ಯಕರ್ತರಲ್ಲಿ ದುಗುಡವೇಕೆ?
ಹೆಬ್ಬಾರ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರಲ್ಲಿ ದುಗುಡ ಪ್ರಾರಂಭವಾಗಿದೆ. ಅವರನ್ನು ನಂಬಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ನೂರಾರು ಕಾರ್ಯಕರ್ತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಬ್ಲಾಕ್ ಅಧ್ಯಕ್ಷರಿಂದ ಗ್ರಾಪಂ ಘಟಕಾಧ್ಯಕ್ಷರವೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶೇ.90 ರಷ್ಟು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇವರೆಲ್ಲರಿಗೂ ಮುಂದೇನು ಎಂಬ ಭಯ ಕಾಡುತ್ತಿದ್ದು, ಅತ್ತ ಹೆಬ್ಬಾರ್ ಜೊತೆಯೂ ಇಲ್ಲದೇ ಇತ್ತ ಕಾಂಗ್ರೆಸ್ ಪಕ್ಷವೂ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆಯೇ ಎಂಬ ಚಿಂತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.