ಶಿರಸಿ: ಹಾಸನದ ಅರಸಿಕೇರಿ ಶಾಸಕ ಶಿವಲಿಂಗೇಗೌಡ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಉಲ್ಲೇಖಿಸಿದ್ದು, ಈ ಮೂಲಕ ತಾವು ಕಾಂಗ್ರೆಸ್ಗೆ ಹೋಗುವ ಬಗ್ಗೆ ಮತ್ತಷ್ಟು ಖಚಿತಪಡಿಸಿದರು.
ಅರಸಿಕೇರಿಯಿಂದ ಅಂದಾಜು 300 ಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಿರಸಿಯ ವಿಧಾನಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು. ಇದರಿಂದಾಗಿ ಎ.ಟಿ. ರಾಮಸ್ವಾಮಿ ನಂತರ ಜೆಡಿಎಸ್ನ ಎರಡನೇ ವಿಕೆಟ್ ಪತನವಾಗಿದೆ.
ಜೆಡಿಎಸ್ ನಾಯಕರಲ್ಲಿನ ಭಿನ್ನಾಪ್ರಾಯದಿಂದ ಪಕ್ಷ ಬಿಡುತ್ತಿದ್ದೇನೆ- ಶಿವಲಿಂಗೇಗೌಡ.. 3 ಬಾರಿ ಜೆಡಿಎಸ್ನಿಂದ ಶಾಸಕರಾದ ಶಿವಲಿಂಗೇಗೌಡ ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಶಕ್ತಿ ಪ್ರದರ್ಶನ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿನ ನಾಯಕರ ಭಿನ್ನಾಭಿಪ್ರಾಯದಿಂದ ಪಕ್ಷ ಬಿಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಟಿಕೆಟ್ ಸಹ ಖಚಿತ ಆಗಿದೆ ಎಂದರು.
'ನನ್ನೊಂದಿಗೆ ಕಾರ್ಯಕರ್ತರಿದ್ದಾರೆ': ಜೆಡಿಎಸ್ ಭವಿಷ್ಯದ ಬಗ್ಗೆ ನಾನೇನು ಮಾತನಾಡಲ್ಲ. ಆದರೆ ನನ್ನೊಂದಿಗೆ ಕಾರ್ಯಕರ್ತರು ಇದ್ದಾರೆ. ಅದು ಇವತ್ತೇ ಎಲ್ಲರಿಗೂ ತಿಳಿದಂತಾಗಿದೆ. ಇದೇ ಕಾರಣಕ್ಕಾಗಿ ಟಿಕೆಟ್ ಕನ್ಫರ್ಮ್ ಮಾಡಿಕೊಂಡೇ ರಾಜೀನಾಮೆ ನೀಡಿದ್ದೇನೆ. ಇಲ್ಲಿ ಗೆಲುವು ಸೋಲು ಮುಖ್ಯವಲ್ಲ. ಭಿನ್ನಾಭಿಪ್ರಾಯದಿಂದ ಹೊರಬಂದಿದ್ದೇನೆ. ಅದೇ ಕಾರಣದಿಂದ ಬೆಂಗಳೂರಿನಲ್ಲಿ ಸ್ಪೀಕರ್ ಸಿಗದ ಕಾರಣ ಅರಿಸಿಕೇರಿಯಿಂದ ಶಿರಸಿಗೆ ಬಂದು ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಧ್ಯಮದವರಿಗೆ ಶಿವಲಿಂಗೇಗೌಡ ಹೇಳಿದರು. ಹಾಸನ ಜಿಪಂ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಪ್ರಮುಖರು ಶಿವಲಿಂಗೇಗೌಡರಿಗೆ ಸಾಥ್ ನೀಡಿದರು.