ಭಟ್ಕಳ :ಬಹುದಿನದಿಂದಲೂ ಗಡಿ ವಿಚಾರದಲ್ಲಿ ವಿವಾದದಲ್ಲಿರುವ ಶಿರೂರು ಟೋಲ್ ಪ್ಲಾಜಾವೂ ಭಟ್ಕಳ ತಾಲೂಕಿನಲ್ಲಿ ಇಲ್ಲಿಯ ತನಕ ಸಮರ್ಪಕ ರಸ್ತೆ ಕಾಮಗಾರಿ ಮುಗಿಸದೇ ಮಂಗಳವಾರ ರಾತ್ರಿಯಿಂದಲೇ ಭಟ್ಕಳ-ಶಿರೂರು ಸಂಚರಿಸುವ ಸ್ಥಳೀಯ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸಲು ಆರಂಭಿಸಿದೆ. ಈ ಹಿನ್ನೆಲೆ ಬುಧವಾರದಂದು ಶಿರೂರು ಐಆರ್‌ಬಿ ಕಚೇರಿಗೆ ಭಟ್ಕಳ ಟ್ಯಾಕ್ಸಿ ಯೂನಿಯನ್ ಸದಸ್ಯರು ಮುತ್ತಿಗೆ ಹಾಕಿ ಐಆರ್‌ಬಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು.
ಭಟ್ಕಳ ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳಿಂದ ಶಿರೂರು ಪ್ಲಾಜಾ ಐಆರ್‌ಬಿ ಕಚೇರಿಗೆ ಮುತ್ತಿಗೆ ಬಹುದಿನಗಳ ನಿರೀಕ್ಷೆಯ ಶಿರೂರು ಟೋಲ್ ಪ್ಲಾಜಾ ಭಟ್ಕಳ ತಾಲೂಕಿನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾಲೂಕಿನಲ್ಲೆಲ್ಲಿಯೂ ಚತುಷ್ಪಥ ರಸ್ತೆ ಹಾಗೂ ಸಬ್ ರಸ್ತೆ, ಸರ್ವಿಸ್ ರಸ್ತೆಯನ್ನು ನಿರ್ಮಿಸದೇ ಐಆರ್‌ಬಿ ಕಂಪನಿಯೂ ಟೋಲ್ ಆರಂಭಿಸಿದ್ದು, ಭಟ್ಕಳ ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರದಂದು ರಾತ್ರಿ ಭಟ್ಕಳ ಟ್ಯಾಕ್ಸಿ ಚಾಲಕನೊಬ್ಬ ಮಂಗಳೂರಿಗೆ ಬಾಡಿಗೆಗೆ ಹೋಗಿ ಬರುವಾಗ ಎರಡು ಸಲ ಟೋಲ್ ಶುಲ್ಕ ಫಾಸ್ಟ್‌ಟ್ಯಾಗ್ ಮೂಲಕ ಚಾಲಕನ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಬಗ್ಗೆ ಚಾಲಕ ಭಟ್ಕಳ ಯೂನಿಯನ್ ಪ್ರಮುಖರಿಗೆ ತಿಳಿಸಿದ್ದಾನೆ.
ಇದರನ್ವಯ ಬುಧವಾರದಂದು ಭಟ್ಕಳ ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳು ಶಿರೂರಿನ ಐಆರ್‌ಬಿ ಕಂಪನಿಯು ಕಚೇರಿಗೆ ತೆರಳಿ ಪ್ರಾಜೆಕ್ಟ್ ಮ್ಯಾನೇಜರ್‌ನ ಟೋಲ್ ಆರಂಭದ ಬಗ್ಗೆ ಹಾಗೂ ಕಡಿತಗೊಂಡ ಶುಲ್ಕದ ಬಗ್ಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಜೆಕ್ಟ್ ಮ್ಯಾನೇಜರ್ ಇನ್ನೂ ಮೂರು ದಿನದವರೆಗೆ ಟ್ಯಾಕ್ಸಿ ಯೂನಿಯನ್ ವಾಹನಕ್ಕೆ ಯಾವುದೇ ಟೋಲ್ ಶುಲ್ಕವಿಲ್ಲ. ಭಟ್ಕಳ ಯೂನಿಯನ್ ವತಿಯಿಂದ ಬೇಡಿಕೆಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ತಂದು ಸಲ್ಲಿಸಿದ್ದಲ್ಲಿ ಕುಂದಾಪುರದಲ್ಲಿನ ಮೇಲಾಧಿಕಾರಿಗಳ ಕಚೇರಿಗೆ ತಲುಪಿಸಲಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಟೋಲ್ ಆರಂಭದ ಹಿನ್ನೆಲೆ ಬೈಂದೂರು ರಿಕ್ಷಾ ಟೆಂಪೋ ಯೂನಿಯನ್ ಪದಾಧಿಕಾರಿಗಳು ಸಹ ಭೇಟಿ ನೀಡಿ ಅವರ ಬೇಡಿಕೆಯನ್ನು ಐಆರ್‌ಬಿ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ ಮುಂದಿಟ್ಟಿದ್ದು, ಅವರಿಗೂ ಸಹ ಎರಡು ದಿನ ಉಚಿತವಾಗಿ ಓಡಾಡಲು ಮೌಖಿಕ ಅವಕಾಶ ನೀಡಿದ್ದಾರೆ. ಯೂನಿಯನ್ ಪದಾಧಿಕಾರಿಗಳು ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.