ಕಾರವಾರ: ಮಲೆನಾಡು-ಕರಾವಳಿ ಸಂಪರ್ಕಿಸುವ ಶಿರಸಿ-ಕುಮಟಾ ರಸ್ತೆ ಹದಗೆಟ್ಟು ದಶಕಗಳೇ ಕಳೆದಿದೆ. ಕಳೆದೆರಡು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ಧೂಳುಮಯ ರಸ್ತೆಯಲ್ಲೇ ನಿತ್ಯ ಓಡಾಟ ನಡೆಸುವವರಿಗೆ ಉಸಿರುಗಟ್ಟುವ ಸ್ಥಿತಿ ಇದ್ದು ಜನರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ಓಡಾಡುತ್ತಿದ್ದಾರೆ.
ಭಾರತ್ ಮಾಲಾ ಫೇಸ್-1ರ ಅಡಿಯಲ್ಲಿ ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೆಕೇರಿ ಬಂದರು ಲಿಂಕ್ ರೋಡ್‌ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 766ಇ ಆಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ 2018ರಲ್ಲಿ ಅನುಮೋದನೆ ನೀಡಿತ್ತು.
ಅದರಂತೆ, ವಿಳಂಬವಾಗಿಯಾದರೂ 2021ರಲ್ಲಿ ಗುತ್ತಿಗೆ ಸಂಸ್ಥೆ ಆರ್‌ಎನ್‌ಎಸ್ ಕಾಮಗಾರಿ ಆರಂಭಿಸಿತ್ತಾದರೂ, ಈವರೆಗೆ ಎಲ್ಲಿಯೂ ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ. ಮೊದಲೇ ಕಡಿಮೆ ಅಗಲದ ರಸ್ತೆಯಾಗಿರುವ ಈ ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ಬದಿಯಲ್ಲಿ ವಾಹನಗಳ ಓಡಾಟ ಸಾಹಸಯಮಯವಾಗಿ ಪರಿಣಮಿಸಿದೆ.