ಶಿರಸಿ: ಮಲೆನಾಡು ಭಾಗದಲ್ಲಿ ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ. ಅದರಲ್ಲೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ ಚಕ್ಲಿ ಕಂಬಳಕ್ಕೆ ಹಲವು ವಿಶೇಷತೆಗಳಿವೆ. ಈಗ ಚೌತಿಗೆ ಕೆಲವೇ ದಿನ ಉಳಿದಿರುವಾಗ ಮಲೆನಾಡಿನ ಶಿರಸಿಯ ಗ್ರಾಮೀಣ ಭಾಗದಲ್ಲಿ ಜೋರಾಗಿ ಚಕ್ಲಿ ಕಂಬಳ ನಡೆಯುತ್ತಿದೆ.
ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ, ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು, ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಆಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನ ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸ್ತಾರೆ. ಇದೀಗ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಕೆಲಸ ಎಲ್ಲೆಡೆ ಸಂಭ್ರಮದಿಂದ ಸಾಗಿದೆ.
ಅದರಲ್ಲೂ ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಮಾಡಲಾಗುತ್ತಿದೆ. ಎಲ್ಲ ಕಂಬಳದಂತೆ ಕಲ್ಮನೆ ಹೆಗ್ಗಾರು, ಹೆಗಡೆಕಟ್ಟ ಸುತ್ತಮುತ್ತಲಿನ ಉರಿನವರು, ಸಂಬಂಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಈ ಕಂಬಳಕ್ಕೆ ಸಹಕರಿಸುತ್ತಾರೆ. ಕೈ ಚಕ್ಕುಲಿ ಕಂಬಳದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ, ಪರಿಣಿತರು ಅಕ್ಷರಗಳನ್ನು ಸಹ ಬರೆಯುತ್ತಾರೆ. ಅನಾದಿ ಕಾಲದಿಂದಲೂ ರೂಢಿಯಲ್ಲಿದ್ದ ಚಕ್ಕುಲಿ ಕಂಬಳ ಮಾಡೋದು ಅಂದ್ರೆ ಇವರಿಗೆ ಎಲ್ಲಿಲ್ಲದ ಸಂತೋಷ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರೂ, ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈಯಲ್ಲೇ ಚಕ್ಕುಲಿ ತಯಾರಿಸುತ್ತಾರೆ.