ಶಿರಸಿ: ಮೀಸಲಾತಿಗಾಗಿ ಹೋರಾಟ ಒಂದೆಡೆಯಾದ್ರೆ, ಪ್ರತ್ಯೇಕ ಜಿಲ್ಲೆ ರಚನೆ ಕೂಗು ಮತ್ತೊಂದೆಡೆ. ದಿನಕ್ಕೊಂದು ಬೇಡಿಕೆಗಳು ಸರ್ಕಾರದ ಮುಂದೆ ಬಂದು ನಿಲ್ಲುತ್ತಿವೆ. ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ ಹಲವು ಜಿಲ್ಲೆಗಳ ರಚನೆಯ ಹೋರಾಟಕ್ಕೆ ನಾಂದಿ ಹಾಡಿದಂತಾಗಿದೆ.
ದಶಕಗಳ ಕಾಲದಿಂದ ಪ್ರತ್ಯೇಕ ಜಿಲ್ಲೆಗೆ ಹೋರಾಟ ನಡೆಸುತ್ತಿರೋ ಶಿರಸಿ ಜಿಲ್ಲಾ ಹೋರಾಟ ಸಮಿತಿ ತನ್ನ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ನಿರ್ಧಾರಕ್ಕೆ ಬಂದಿದ್ದು, ಫೆ. 24(ಬುಧವಾರ) ಶಿರಸಿ ಬಂದ್ಗೆ ಕರೆ ನೀಡಿದೆ. ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಶಿರಸಿ ಜಿಲ್ಲೆಯ ಹೋರಾಟದ ರೂಪುರೇಷೆಗಳು ಪ್ರಾರಂಭವಾಗಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಕೂಡ ಅಸ್ತಿತ್ವಕ್ಕೆ ಬಂದಿತ್ತು. ಕಳೆದ 2 ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟಗಳು ಪ್ರಾರಂಭವಾದ್ದು, ಇದೀಗ ಜಿಲ್ಲಾ ಹೋರಾಟ ಸಮಿತಿ ಹಲವಾರು ರೀತಿಯ ವಿಭಿನ್ನ ಪ್ರತಿಭಟನೆಗಳ ಮೂಲಕ ನೂತನ ಶಿರಸಿ ಜಿಲ್ಲೆಗಾಗಿ ಅಗ್ರಹಿಸುತ್ತಾ ಬಂದಿದೆ.
ಉತ್ತರ ಕನ್ನಡ ಜಿಲ್ಲೆ ಬರೋಬ್ಬರಿ 12 ತಾಲೂಕುಗಳನ್ನು ಹೊಂದಿದ ಅತಿದೊಡ್ಡ ಜಿಲ್ಲೆಯಾಗಿದ್ದು, ಅದನ್ನು ಇಬ್ಭಾಗಿಸಿ 7 ತಾಲೂಕುಗಳನ್ನು ಒಳಗೊಂಡ ಶಿರಸಿ ಜಿಲ್ಲೆ ರಚನೆಗೆ ಆಗ್ರಹ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಫೆ. 24ರಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿರಸಿ ಬಂದ್ಗೆ ಕರೆ ನೀಡಲಾಗಿದೆ.