ಕಾರವಾರ: ಅದು ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ರಾಷ್ಟ್ರೀಯ ಹೆದ್ದಾರಿ. ಇಲ್ಲಿ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಉರುಳಿದರೂ ಈವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅರೆ ಬರೆ ಕಾಮಗಾರಿಯಾಗಿರುವ ಹೆದ್ದಾರಿಯಲ್ಲಿ ತಗ್ಗು, ದಿನ್ನೆ, ಧೂಳಿನ ಮಧ್ಯ ಅನಿವಾರ್ಯವಾಗಿ ವಾಹನಗಳು ಸಂಚಾರ ಮಾಡುವಂತಾಗಿದೆ. ಇನ್ನು ಈ ಹೆದ್ದಾರಿ ಸಂಚಾರ ಪ್ರಯಾಣಿಕರ ಪಾಲಿಗೆ ನಿತ್ಯ ನರಕಯಾತನೆಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಒಂದೆಡೆ ಹೀಗೆ ದಟ್ಟ ಧೂಳಿನ ಮಧ್ಯೆ ಸಂಚಾರ ಮಾಡುತ್ತಿರುವ ವಾಹನಗಳು. ಮತ್ತೊಂದೆಡೆ ಮುಖಕ್ಕೆ ಮಾಸ್ಕ್ ಧರಿಸಿ ಧೂಳಿನ ನಡುವೆಯೇ ಪ್ರಯಾಣಿಸುತ್ತಿರುವ ವಾಹನ ಸವಾರರು. ಇವುಗಳೆಲ್ಲವುದರ ಮಧ್ಯೆ ಧೂಳು ಮುಳುಗಿ ಸೊರಗಿ ನಿಂತಿರುವ ನಿತ್ಯಹರಿದ್ವರ್ಣ ಕಾಡುಗಳು. ಈ ನರಕಯಾತನೆ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ - ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬರುತ್ತಿದೆ.
ಆಮೆ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿ: ಹೌದು ಭಾರತ್ ಮಾಲಾ ಯೋಜನೆಯಡಿ ಶಿರಸಿಯಿಂದ ಕುಮಟಾವರಗೆ 60 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ 2018 ರಲ್ಲಿ ಅನುಮೋದನೆ ನೀಡಿತು. ಆದರೆ, ಪರಿಸರ ವಾದಿಗಳಿಂದ ಮರಗಳ ಮಾರಣ ಹೋಮವಾಗುತ್ತದೆ ಎಂದು, ಎರಡು ವರ್ಷಗಳ ಕಾಲ ಸ್ಟೇ ತರಲಾಗಿತ್ತು. ನಂತರದಲ್ಲಿ ಎಲ್ಲಾ ಅಡೆತಡೆಗಳನ್ನು ಬಗೆ ಹರಸಿ ಸುಮಾರು 440 ಕೋಟಿ ರೂ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿಯನ್ನು 2021 ರಲ್ಲಿ ಪ್ರಾರಂಭ ಮಾಡಿದೆ. ಆದರೆ, ಈ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದರಿಂದ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಪುಣೆ - ಬೆಂಗಳೂರಿನ ಸಾವಿನ ಹೆದ್ದಾರಿಗೆ ಬಂತು ಕಾಮಗಾರಿ ಭಾಗ್ಯ