ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಟಕೊಪ್ಪದ ತುಳಸಿ ಹೆಗಡೆ ಎಂಬ ಬಾಲಕಿ ಕಳೆದ ಏಳು ವರ್ಷದಿಂದ ನಿರಂತರವಾಗಿ ವಿಶ್ವಶಾಂತಿ ಸಂದೇಶ ಸಾರುವ ಯಕ್ಷ ನೃತ್ಯ ಮಾಡುತ್ತಿದ್ದರು. ಈ ನೃತ್ಯದ ಮೂಲಕ ಇದೀಗ ಇವರು ಪ್ರತಿಷ್ಟಿತ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಈ ಮೂಲಕ ದೇಶದ ಅತೀ ಕಿರಿಯ ವಯಸ್ಸಿನ ವಿಶ್ವಶಾಂತಿ ಸಂದೇಶ ಸಾರುವ ಏಕೈಕ ಬಾಲಕಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಮಾರಿಕಾಂಬ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆಯ ಸಾಧನೆಗೆ ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಲಭಿಸಿದೆ. ಪೂನಾದ ಸಂಸ್ಥೆಯೊಂದು ನೀಡುವ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್ ಕೂಡ ಲಭಿಸಿದ್ದು, ಹಲವು ಪ್ರಶಸ್ತಿಗಳಿಗೆ ಬಾಲಕಿ ಬಾಜನಳಾಗಿದ್ದಾಳೆ. ತುಳಸಿ ಹೆಗಡೆಯು ಒಂದು ಗಂಟೆಗೂ ಅಧಿಕ ಕಾಲದ ಯಕ್ಷನೃತ್ಯ ರೂಪಕವನ್ನು ಪ್ರಸ್ತುತಗೊಳಿಸುತ್ತಿದ್ದಾಳೆ.