ಕರ್ನಾಟಕ

karnataka

ETV Bharat / state

ಹಣದ ಸಮಸ್ಯೆ ಅಂತ ದುರ್ಮಾರ್ಗ: ಕಾರವಾರದಲ್ಲಿ ಮೋಜು ಮಸ್ತಿಗೆಂದು ಕಳ್ಳತನಕ್ಕಿಳಿದ ಯುವಕರು ಅಂದರ್​ - ಕಾರವಾರದಲ್ಲಿ ಏಳು ಕಳ್ಳರ ಬಂಧನ

ಕೊರೊನಾದಿಂದಾಗಿ ಹಾಗೂ ಲಾಕ್​ಡೌನ್ ವಿಧಿಸಿದ್ದ ಕಾರಣ ಆರ್ಥಿಕವಾಗಿ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಸ್ನೇಹಿತರ ತಂಡವೊಂದು ಕಳ್ಳತನಕ್ಕಿಳಿದಿದ್ದರು. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Karwar
ಕಾರವಾರ

By

Published : Jun 28, 2021, 7:54 PM IST

ಕಾರವಾರ:ಕೊರೊನಾ ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಜಿಲ್ಲೆಯ ಗೋಕರ್ಣ, ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ 7 ಯುವಕರು ಹಾಗೂ ಕಳ್ಳತನದ ವಸ್ತುಗಳನ್ನು ಖರೀದಿಸುತ್ತಿದ್ದ ವ್ಯಕ್ತಿ ಸೇರಿದಂತೆ 8 ಮಂದಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕುಮಟಾ ಸಿಪಿಐ ಶಿವಪ್ರಕಾಶ್​ ನಾಯ್ಕ ಅವರ ನೇತೃತ್ವದಲ್ಲಿ ಗೋಕರ್ಣ ಪೊಲೀಸರು ಗೋಕರ್ಣ ಠಾಣೆಯ 5, ಅಂಕೋಲಾ ಠಾಣೆ ವ್ಯಾಪ್ತಿಯ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಕೊನೆಗೂ ಬಂಧಿಸಿದ್ದಾರೆ.

ಅಂಕೋಲಾ ಬೊಬ್ರುವಾಡದ ಪ್ರಶಾಂತ್ ನಾಯ್ಕ, ತೆಂಕಣಕೇರಿಯ ಹರ್ಷ ನಾಯ್ಕ, ಶಿರಕುಳಿಯ ಗಣೇಶ ನಾಯ್ಕ, ಕೇಣಿಯ ರಾಹುಲ್ ಬಂಟ್, ಶಿರಸಿ ಕಸ್ತೂರಬಾ ನಗರದ ಶ್ರೀಕಾಂತ್ ದೇವಾಡಿಗ, ನಿಹಾಲ್ ದೇವಳಿ, ದೊಡ್ನಳ್ಳಿ ರಸ್ತೆಯ ಸಂದೀಪ ಮರಾಠೆ ಹಾಗೂ ಬನವಾಸಿಯ ಅಶೋಕ ರಾಯ್ಕರ್ ಬಂಧಿತರು.

ಸದ್ರಿ ಆರೋಪಿಗಳಿಂದ 351 ಗ್ರಾಂ ಆಭರಣಗಳು, 1 ಕೆ.ಜಿ ಬೆಳ್ಳಿ, 5 ಗ್ಯಾಸ್ ಸಿಲಿಂಡರ್​ಗಳು, 1 ಏರ್ ಗನ್, 3 ಮೋಟಾರ್ ಸೈಕಲ್ ಹಾಗೂ 8 ಮೊಬೈಲ್ ಫೋನ್ ಸೇರಿದಂತೆ ಒಟ್ಟು 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರ ಪೈಕಿ ನಾಲ್ವರು ಐಟಿಐ ಪೂರ್ಣಗೊಳಿಸಿದವರು. ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೊನಾದಿಂದಾಗಿ ಹಾಗೂ ಲಾಕ್ ಡೌನ್ ವಿಧಿಸಿದ್ದ ಕಾರಣ ಆರ್ಥಿಕವಾಗಿ ಸಮಸ್ಯೆ ಉಂಟಾಗಿದೆ. ವೈಯಕ್ತಿಕ ಮೋಜು ಮಸ್ತಿಗೆ ಹಣದ ಕೊರತೆಯಾದಾಗ ಎಲ್ಲರೂ ಸೇರಿಕೊಂಡು ಮೊದ ಮೊದಲು ಶಾಲೆ, ಅಂಗನವಾಡಿಗಳ ಸಿಲಿಂಡರ್​ಗಳನ್ನ ಕದ್ದು ಮಾರಲು ಶುರು ಮಾಡುತ್ತಾರೆ. ಹೀಗೆ ಕೆಲವು ತಿಂಗಳು ಕಳ್ಳತನ ಮುಂದುವರಿಸಿದ ಈ ತಂಡ, ಒಂದು ದಿನ ಮನೆಯೊಂದರಲ್ಲಿ ಸಿಲಿಂಡರ್ ಕಳವಿಗೆ ತೆರಳಿದಾಗ ಚಿನ್ನಾಭರಣಗಳು ಸಿಗುತ್ತವೆ. ಸಿಲಿಂಡರ್ ಕದ್ದು ಸಣ್ಣಪುಟ್ಟ ಕಳವು ಪ್ರಕರಣಗಳಲ್ಲಿ ಅದಾಗಲೇ ಪೊಲೀಸರ ಲಿಸ್ಟ್​ನಲ್ಲಿ ಹೆಸರು ನಮೂದಿಸಿಕೊಂಡಿದ್ದ ಈ ತಂಡ ಅಂದಿನಿಂದ ಚಿನ್ನಾಭರಣ, ನಗದು, ಬೈಕ್​ಗಳ ಕಳವಿಗೂ ಮುಂದಾಗುತ್ತದೆ. ಕದ್ದ ವಸ್ತುಗಳನ್ನು ಓರ್ವ ವ್ಯಕ್ತಿಗೆ ಮಾರಿ, ಬಂದ ಹಣದಿಂದ ಲಾಕ್​ಡೌನ್ ಸಂದರ್ಭದಲ್ಲೂ ಪಾರ್ಟಿ ಸೇರಿದಂತೆ ಮೋಜುಮಸ್ತಿಯ ಜೀವನ ಕಳೆಯುತ್ತಿದ್ದರು. ಆದರೆ ಅದೃಷ್ಟ ಕೆಟ್ಟು ಇದೀಗ ಎಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ. ಸದ್ರಿ ಅಧಿಕಾರಿ ಸಿಬ್ಬಂದಿ ಕಾರ್ಯಕ್ಕೆ ಎಸ್​ಪಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ABOUT THE AUTHOR

...view details