ಕಾರವಾರ :ಉತ್ತರಕನ್ನಡ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಒಂದಿಲ್ಲೊಂದು ಕಾರಣಗಳಿಂದ ಸದಾ ವಿವಾದಕ್ಕೆ ಗುರಿಯಾಗುತ್ತಿದೆ. ಸದ್ಯ ಹೆದ್ದಾರಿ ಕಾರ್ಯ ಶೇ. 84ರಷ್ಟು ಮುಕ್ತಾಯವಾದ ಹಿನ್ನೆಲೆ ಲೋಕಾರ್ಪಣೆಗೊಳಿಸಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳುವುದಾಗಿ ಹೇಳಲಾಗಿದೆ. ಆದ್ರೆ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹೆದ್ದಾರಿಗೆ ಸರ್ವೀಸ್ ರಸ್ತೆಯನ್ನೇ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವ ಆರೋಪ ಕೇಳಿ ಬಂದಿವೆ.
ಸರ್ವೀಸ್ ರಸ್ತೆ ಇಲ್ಲದೆ ಜನಸಾಮಾನ್ಯರ ಪರದಾಟ.. ಸತತ 6 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೆದ್ದಾರಿ ಚತುಷ್ಪಥಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ, ಈವರೆಗೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಶೇ.84ರಷ್ಟು ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಈವರೆಗೂ ಸಹ ಕಾಮಗಾರಿ ಪೂರ್ಣವಾಗದೇ ಅವೈಜ್ಞಾನಿಕ ಕಾಮಗಾರಿ ನಡೆದಿದೆ ಎನ್ನಲಾಗ್ತಿದೆ.
ಮುಖ್ಯವಾಗಿ ಕಾರವಾರ, ಅಂಕೋಲಾ ತಾಲೂಕುಗಳಲ್ಲಿ ಟನಲ್, ಫ್ಲೈಓವರ್ ನಿರ್ಮಾಣ ಕಾರ್ಯ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ಇನ್ನೊಂದೆಡೆ ಹೆದ್ದಾರಿ ಹಾದು ಹೋಗಿರುವ ಸಾಕಷ್ಟು ಗ್ರಾಮಗಳಲ್ಲಿ ಯಾವುದೇ ರೀತಿಯ ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಇದರಿಂದಾಗಿ ಜನ ಸಾಮಾನ್ಯರು ಪರದಾಡ ಬೇಕಾಗಿದೆ. ಗ್ರಾಮಗಳ ಬಳಿ ಸರ್ವೀಸ್ ರಸ್ತೆಯನ್ನ ನಿರ್ಮಾಣ ಮಾಡುವುದು ಕಡ್ಡಾಯವಾಗಿದೆ.
ಈ ಹಿಂದೆ ಇದ್ದ ಭೂಸ್ವಾಧೀನ ಅಧಿಕಾರಿ ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಭೂಮಿ ಪಡೆದುಕೊಂಡಿದ್ದಾರೆ. ಹೀಗಾಗಿ, ಇದೀಗ ಹಲವೆಡೆ ಸರ್ವೀಸ್ ರಸ್ತೆ ಮಾಡುವುದಕ್ಕೆ ಭೂಮಿಯೇ ಇಲ್ಲದಂತಾಗಿದ್ದು, ಹೆದ್ದಾರಿಯಂಚಿನ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯ ಕರಾವಳಿಯ 5 ತಾಲೂಕುಗಳಲ್ಲಿ ಹೆದ್ದಾರಿ ಹಾದು ಹೋಗಿದೆ. ಕೆಲವೆಡೆ ಹೆಚ್ಚುವರಿ ಭೂಮಿ ಇದ್ದ ಹಿನ್ನೆಲೆ ಅಂತಹ ಗ್ರಾಮಗಳ ಬಳಿ ಈಗಾಗಲೇ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ.
ಆದ್ರೆ, ಕೆಲ ಗ್ರಾಮಗಳ ನಡುವೆಯೇ ಹೆದ್ದಾರಿ ಹಾದು ಹೋಗಿದ್ದು, ಹೆದ್ದಾರಿಗೆ ಜಾಗ ನೀಡಿದ ಬಳಿಕ ಈಗಾಗಲೇ ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಅಂತಹ ಸ್ಥಳಗಳಲ್ಲಿ ಸರ್ವೀಸ್ ರಸ್ತೆ ಮಾಡೋದಕ್ಕೆ ಅಗತ್ಯ ಜಾಗದ ಕೊರತೆ ಇದ್ದು, ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಇದೀಗ ಗ್ರಾಮಸ್ಥರು ಹೆದ್ದಾರಿ ದಾಟಲು ಪರದಾಡುವಂತಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಸದ್ಯ ಹೆದ್ದಾರಿಯನ್ನು ಪೂರ್ಣಗೊಳಿಸುವುದು ಮೊದಲ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಇರುವ ಕಾಮಗಾರಿಗಳನ್ನ ಹೆದ್ದಾರಿ ಅಗಲೀಕರಣ ನಡೆಸುತ್ತಿರುವ ಐಆರ್‌ಬಿ ಕಂಪನಿ ಮಾಡಿಕೊಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
6 ವರ್ಷ ಕಳೆದರೂ ಹೆದ್ದಾರಿ ಪೂರ್ಣಗೊಳ್ಳದಿರುವುದು ಒಂದೆಡೆಯಾದ್ರೆ, ಇನ್ನೊಂದೆಡೆ ಅಗತ್ಯ ಸರ್ವೀಸ್ ರಸ್ತೆ ನಿರ್ಮಾಣ ಮಾಡದಿರುವುದು ಜನಸಾಮಾನ್ಯರ ಪರದಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಸಮರ್ಪಕ ಹೆದ್ದಾರಿ ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.