ಕಾರವಾರ: ಹಿರಿಯ ಯಕ್ಷಗಾನ ಕಲಾವಿದ ಮಣ್ಣಿಗೆ ತಿಮ್ಮಣ್ಣ ಯಾಜಿ ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ಕಾರವಾರ: ಹಿರಿಯ ಯಕ್ಷಗಾನ ಕಲಾವಿದ ಮಣ್ಣಿಗೆ ತಿಮ್ಮಣ್ಣ ಇನ್ನಿಲ್ಲ - ಮೆದುಳು ನಿಷ್ಕ್ರಿಯತೆಯಿಂದ ಯಕ್ಷಗಾನ ಕಲಾವಿದ ಸಾವು
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಮಣ್ಣಿಗೆ ತಿಮ್ಮಣ್ಣ ಯಾಜಿ ಅವರು ಮೆದುಳು ನಿಷ್ಕ್ರಿಯತೆಯಿಂದ ಸಾವನ್ನಪ್ಪಿದ್ದಾರೆ. ಮೃತರಿಗೆ 94 ವರ್ಷ ವಯಸ್ಸಾಗಿತ್ತು.

94 ವರ್ಷದ ತಿಮ್ಮಣ್ಣ ಮೆದುಳು ನಿಷ್ಕ್ರಿಯತೆಯಿಂದ ಸಾವನ್ನಪ್ಪಿದ್ದಾರೆ. ಯಕ್ಷಗಾನದ ಶಕಪುರುಷ ಕೆರೆಮನೆ ಶಿವರಾಮ ಹೆಗಡೆಯವರ ಜೊತೆ ಅಭಿನಯಿಸುತ್ತಿದ್ದ ಅವರು ಕೆರೆಮನೆ ಮೇಳದಿಂದ ಕಲಾಸೇವೆ ಆರಂಭಿಸಿ, ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಜೊತೆ ಅಭಿನಯಿಸಿ, ಅಲ್ಲಿಂದಲೇ ನಿವೃತ್ತಿ ಪಡೆದಿದ್ದರು. ಶಿವರಾಮ ಹೆಗಡೆಯವರ ಜರಾಸಂಧ ಇವರ ಭೀಮನ ಜೋಡಿ ಪ್ರಸಿದ್ಧವಾಗಿತ್ತು. ಭೀಮ, ಧರ್ಮ ರಾಯ, ಕಿರಾತಕ ಮೊದಲಾದ ಪಾತ್ರಗಳಿಂದ ಇವರು ಖ್ಯಾತಿ ಗಳಿಸಿದ್ದರು.
ಮೃತರಿಗೆ ಓರ್ವ ಪುತ್ರಿ ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಅವರ ಅಗಲಿಕೆಗೆ ಶಾಸಕ ಸುನೀಲ ನಾಯ್ಕ, ಕೆರೆಮನೆ ಶಿವಾನಂದ ಹೆಗಡೆ, ಬಳ್ಕೂರ ಕೃಷ್ಣಯಾಜಿ, ಸಪ್ತಕದ ಜಿ.ಎಸ್ ಹೆಗಡೆ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ. ಇಳಿವಯಸ್ಸಿನಲ್ಲಿ ದೇವಾಲಯವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡಿದ್ದ ಅವರು ವಿನಯಶೀಲ, ಸದ್ಗುಣಿ ಕಲಾವಿದರಾಗಿದ್ದರು.