ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 47 ಕೆ.ಜಿ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಅಂಕೋಲಾದಲ್ಲಿ ನಾಶಪಡಿಸಲಾಯಿತು. ತಾಲೂಕಿನ ಬೊಗ್ರಿಬೈಲ್‌ನ ಕೆನರಾ ಐಎಂಎ(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿ ಅವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸಮ್ಮುಖದಲ್ಲಿ ಶನಿವಾರ ಮಾದಕ ವಸ್ತುಗಳನ್ನು ಸುಟ್ಟು ಹಾಕಲಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ಶೇಖರಣೆ ಸಂಬಂಧ 10-12 ಪ್ರಕರಣಗಳಿದ್ದವು. ಪೊಲೀಸರ ತಂಡ ರಚಿಸಿ ಗಾಂಜಾ ಸಾಗಾಟ ಹಾಗೂ ಸೇವನೆ ಮಾಡುವವರ ಮಾಹಿತಿ ಕಲೆಹಾಕಿ ಅಂಥವರನ್ನು ಮಟ್ಟಹಾಕುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಮೂವರ ವಿರುದ್ಧ ದೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ವಿಚಾರಣೆಗೆ ಒಳಪಟ್ಟಿದ್ದ ತಾಲೂಕಿನ ನೆಲೆಮಾವ್ ಗಣಪತಿ ಭಟ್ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಇರಬಸಪ್ಪ ವಾಲಿಕಾರ ಹುಬ್ಬಳ್ಳಿ, ಚಂದ್ರಶೇಖರ ಪೂಜಾರ ಧಾರವಾಡ, ಶಿವಶಂಕರಪ್ಪ ಕುರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರೊಂದಿಗೆ ಜಿ.ಬಿ.ಭಟ್ ಅವರ ಹಣದ ವ್ಯವಹಾರ ಇತ್ತು. ಇವರಿಂದ ಹಣ ಪಡೆದಿದ್ದ ಜಿ.ಬಿ.ಭಟ್ ಎಂಬವರು ಶ್ಯಾಮ್ ಭಟ್ ಎನ್ನುವವರಿಗೆ ನೀಡಿದ್ದರು. ಅವರು ಹಣ ಕೊಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಆರೋಪಿಗಳು ಹಣಕ್ಕಾಗಿ ಪೀಡಿಸುತ್ತಿದ್ದು, ಮಾ.10ರಂದು ಮೂವರು ಮನೆಯ ಬಳಿ ಬಂದು ಅವಾಚ್ಯ ಶಬ್ದದಿಂದ ನಿಂದಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದರು. ಅದೇ ಒತ್ತಡದಲ್ಲಿದ್ದ ಜಿ.ಬಿ.ಭಟ್ ಶುಕ್ರವಾರ ತಾಲೂಕಿನ ನಡಿಮನೆ ಬಸ್ ನಿಲ್ದಾಣ ಬಳಿಯಿರುವ ಸಂಬಂಧಿಕರಿಗೆ ಸೇರಿದ ತೋಟದ ಮನೆಯಲ್ಲಿ ಇರಬಸಪ್ಪ ವಾಲಿಕಾರ ಹುಬ್ಬಳ್ಳಿ, ಚಂದ್ರಶೇಖರ ಪೂಜಾರ ಧಾರವಾಡ, ಶಿವಶಂಕರಪ್ಪ ಕುರಿ ಅವರಿಗೆ ಕೊಡಬೇಕಾದ ಹಣ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಆದರೆ ಅವರು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಕ್ರಮ ಮದ್ಯ ಸಾಗಾಟ-ಆರೋಪಿ ಬಂಧನ: ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಅನಧಿಕೃತವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಓರ್ವನನ್ನು ಚಿತ್ತಾಕುಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮುಡಗೇರಿ ಮೂಲದ ನಿಜಾಮುದ್ದೀನ ಬದ್ರುದ್ದೀನ ಖಾತಿಬಾ ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧಿತನಿಂದ 36,300 ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ.