ಶಿರಸಿ:ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಬಲಿಯಾಗಿದ್ದ ಗ್ರಾಮವೊಂದರಲ್ಲಿ ಮಕ್ಕಳು ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಚ್ಛ ಭಾರತ್ ಆಂದೋಲನಕ್ಕೆ ತಮ್ಮ ಕಿರು ಕಾಣಿಕೆ ನೀಡಿದ್ದಾರೆ.
ಹೆಗ್ಗಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ, ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಜೊತೆಗೂಡಿ ಭಾನುವಾರದ ರಜಾ ದಿನದಂದು ಗಂಗಾವಳಿ ನೆರೆ ಪೀಡಿತ ಪ್ರದೇಶವಾದ ಹೆಗ್ಗಾರ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿ ಸೈಕಲ್ನಲ್ಲಿ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ವಿ ಚೊಕ್ಕ ಮಾಡಿದ್ದಾರೆ.
ಮಕ್ಕಳ ಸ್ವಚ್ಛತಾ ಕಾರ್ಯ ಕಂಡ ಊರವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ ಎಂದು ಪ್ರಶ್ನಿಸಿದ್ದಾರೆ. ಅದೇನೂ ಇಲ್ಲ, ನಾವು ಪ್ರಧಾನಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ. ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.