ಕಾರವಾರ: ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಡಲು ಪ್ರಕ್ಷುಬ್ಧವಾಗಿದ್ದು, ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಪ್ರವಾಸಿ ತಾಣಗಳಿಂದಲೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಕಡಲತೀರಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು. ಈ ಕಾರಣದಿಂದಲೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಕಡಲತೀರಕ್ಕೆ ಬಾರದೇ ಹೋಗುವುದಿಲ್ಲ. ಆದರೆ ಈ ಬಾರಿ ತಡವಾಗಿ ಆರಂಭವಾದ ಮಳೆ ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದು, ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇನ್ನು ಕಡಲಿನಲ್ಲಿ ಅಲೆಗಳ ಅಬ್ಬರ ಅಪಾಯದ ಮಟ್ಟವನ್ನು ತಲುಪಿವೆ.
ಕಾರವಾರದಲ್ಲಿನ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಡಲು ಪ್ರಕ್ಷುಬ್ದಗೊಳ್ಳುವುದರಿಂದ ಪ್ರವಾಸಕ್ಕೆ ಬಂದವರು, ಕಡಲ ಅಲೆಗಳಿಗೆ ಆಕರ್ಷಿತರಾಗಿ ನೀರಿಗೆ ಇಳಿಯುತ್ತಾರೆ. ಈ ವೇಳೆ ಅದೆಷ್ಟೋ ಜನರು ಅಪಾಯಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳಿವೆ. ಈ ಕಾರಣದಿಂದ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಓಂ ಬೀಚ್, ಕುಡ್ಲೇ ಬೀಚ್, ಹೊನ್ನಾವರದ ಇಕೋ ಬೀಚ್, ಅಂಕೊಲಾದ ನದಿಭಾಗ್ ಸೇರಿದಂತೆ ಇತರೆ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅಪಾಯದ ಪ್ರದೇಶಗಳಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ನೀರಿಗಿಳಿಯದಂತೆ ಸೂಚನೆ ನೀಡಿದೆ.
ಬೇಸಿಗೆ ಕಾಲದಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಅಲ್ಲದೆ ಪ್ರವಾಸಿಗರನ್ನು ರಂಜಿಸಲೆಂದೇ ಅಡ್ವೆಂಚರ್ ಸ್ಪೋರ್ಟ್ಸ್ ನಡೆಯುತ್ತದೆ. ಆದರೆ ಇದೀಗ ಮಳೆ ಹಾಗೂ ಕಡಲಬ್ಬರಕ್ಕೆ ಎಲ್ಲವನ್ನು ಬಂದ್ ಮಾಡಿದ್ದು, ಜಾಗೃತಿ ಮೂಡಿಸಲಾಗುತ್ತಿದೆ.