ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಕರಾವಳಿ ತಾಲ್ಲೂಕುಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಕಡಲತೀರ ಇರುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಗಾಳಿ ಬೀಸುತ್ತಿದ್ದು ಸಮುದ್ರದಲ್ಲಿ ರಕ್ಕಸ ರೂಪದ ಅಲೆಗಳು ಉಂಟಾಗುತ್ತಿವೆ. ಪರಿಣಾಮ ಆಳೆತ್ತರದ ಅಲೆಗಳು ದಡಕ್ಕೆ ವೇಗವಾಗಿ ಅಪ್ಪಳಿಸುವುದರಿಂದ ಕಡಲುಕೊರೆತ ಉಂಟಾಗುತ್ತಿದೆ.
ವರುಣನ ಆರ್ಭಟಕ್ಕೆ ಕರಾವಳಿ ತತ್ತರ; ರಕ್ಕಸ ಅಲೆಗಳಿಗೆ ಕೊಚ್ಚಿಹೋಗುತ್ತಿರುವ ಕಡಲ ತೀರ..! ಬೃಹತ್ ಗಾತ್ರದ ಅಲೆಗಳ ಆರ್ಭಟದಿಂದ ನಿಧಾನವಾಗಿ ತಡೆಗೋಡೆ ಕೂಡ ಕೊಚ್ಚಿಹೋಗುತ್ತಿದ್ದು, ತೀರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ. ಮೀನುಗಾರರು ತಮ್ಮ ಬಲೆ, ಬೋಟುಗಳನ್ನು ದಡದಲ್ಲಿ ಇರಿಸಲು ಸಾಧ್ಯವಾಗದೇ ಮೇಲಕ್ಕೆ ಏರಿಸಿದ್ದು, ಮಳೆ ಇದೇ ರೀತಿ ಮುಂದುವರೆದಲ್ಲಿ ಮನೆಗಳಿಗೂ ನೀರು ನುಗ್ಗುವ ಭೀತಿ ಕಾಡುತ್ತಿದೆ. ಈ ಬಗ್ಗೆ ತಡೆಗೋಡೆ ನಿರ್ಮಿಸಿಕೊಡುವಂತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು, ಕಾರವಾರ ತಾಲ್ಲೂಕು ವ್ಯಾಪ್ತಿಯ ದೇವಭಾಗ್, ದಾಂಡೇಭಾಗ್, ಮಾಜಾಳಿ ಸೇರಿದಂತೆ ಹಲವೆಡೆ ಈಗಾಗಲೇ ಕಡಲಕೊರೆತ ಪ್ರಾರಂಭವಾಗಿದೆ. ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿಯೂ ಸಹ ಕಡಲಕೊರೆತ ಹೆಚ್ಚಾಗಿದ್ದು, ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು ಹಾಕಲಾಗಿದ್ದ ಆಶ್ರಯತಾಣಗಳು ಸಮುದ್ರ ಪಾಲಾಗಿವೆ. ಇನ್ನು ಕಳೆದ ಬಾರಿಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಸಮುದ್ರ ಪ್ರಕ್ಷುಬ್ಧಗೊಂಡಿರುವುದು ಕಡಲಕೊರೆತ ಹೆಚ್ಚಾಗಲು ಕಾರಣವಾಗಿದೆ.
ಇದನ್ನೂ ಓದಿ: ಕಾರವಾರದ ಅಸ್ನೋಟಿ ಬಳಿ ಗುಡ್ಡ ಕುಸಿತ : ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥ
ಮೂರ್ನಾಲ್ಕು ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಈ ಪ್ರದೇಶದಲ್ಲಿ ಉಳಿಯುವಂತಾಗಿದೆ ಅಂತಾ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮಳೆಯ ಆರ್ಭಟದೊಂದಿಗೆ ಕರಾವಳಿಯಲ್ಲಿ ಕಡಲಕೊರೆತ ಸಮಸ್ಯೆ ಹೆಚ್ಚಾಗಿರುವುದು ಜನರನ್ನ ಆತಂಕಕ್ಕೆ ತಳ್ಳಿದೆ. ಸಂಬಂಧಪಟ್ಟವರು ಈ ಕೂಡಲೇ ಎಚ್ಚೆತ್ತು ಶೀಘ್ರದಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.