ಕಾರವಾರ :ಕೋವಿಡ್ ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರವಾರ ಸೀಬರ್ಡ್ ಪ್ರಾಜೆಕ್ಟ್ನ ಮಹಾನಿರ್ದೇಶಕ ಹಾಗೂ ನೌಕಾಪಡೆಯ ಅತಿ ಹಿರಿಯ ಜಲಾಂತರ್ಗಾಮಿ ನಾವಿಕ ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಮಂಗಳವಾರ ನಿಧನರಾಗಿದ್ದಾರೆ.
10 ದಿನಗಳ ಹಿಂದೆ ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆದಿದ್ದ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಆದರೆ, ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದಾಗಿ ನವದೆಹಲಿಯ ಬೇಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಕೋವಿಡ್‌ಗೆ ಬಲಿಯಾದ ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್
ಏಷ್ಯಾದ ಎರಡನೇ ಅತಿದೊಡ್ಡ ನೌಕಾನೆಲೆಯಾದ ಕಾರವಾರ ಐಎನ್‌ಎಸ್ ಕದಂಬ ನಿರ್ಮಾಣದ ಭಾಗವಾದ ಸೀಬರ್ಡ್ ಯೋಜನೆಯ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಗ್ರೇ ಡಾಲ್ಫಿನ್ ಅಂತಲೇ ಕರೆಯುತ್ತಿದ್ದರು. ಜಲಾಂತರ್ಗಾಮಿ ನಾವಿಕರ ಪೈಕಿ ಅತಿ ಹಿರಿಯರಾಗಿದ್ದ ಅವರು ಹಲವು ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆ ನಡೆಸಿರುವವರಲ್ಲಿ ಪರಿಣಿತರಾಗಿದ್ದರು.
ರಾಷ್ಟ್ರೀಯ ರಕ್ಷಣಾ ಕಾಲೇಜಿನ ಕಮಾಂಡೆಂಟ್ ಮತ್ತು ಪರಮಾಣು ಸುರಕ್ಷತೆಯ ಇನ್ಸ್‌ಪೆಕ್ಟರ್ ಜನರಲ್‌ನಂತಹ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದ ಅವರು, ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್‌ನಲ್ಲಿ ರಕ್ಷಣಾ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 31ರಂದು ಅವರು ನಿವೃತ್ತರಾಗಬೇಕಿತ್ತು. ಆದರೆ, ಅಷ್ಟರಲ್ಲೇ ಕೋವಿಡ್‌ಗೆ ಬಲಿಯಾಗಿದ್ದಾರೆ.