ಭಟ್ಕಳ: ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ಕುಡಿಯುವ ನೀರಿಗಾಗಿ ಸರ್ಕಾರ ಸಾಕಷ್ಟು ಸವಲತ್ತು ಒದಗಿಸಿದ್ದರೂ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಮುದ್ರದ ನೀರು ಕುಡಿಯುವ ನೀರಿಗೆ ಸೇರಿ ಸಂಪೂರ್ಣವಾಗಿ ಕಲುಷಿತಗೊಂಡಿದೆ.
10-12 ವರ್ಷದ ಸಮಸ್ಯೆಗೆ ಈ ತನಕ ಪರಿಹಾರ ಸಿಗದೇ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 150ಕ್ಕೂ ಅಧಿಕ ಕುಟುಂಬಗಳ ನಿವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. 150ಕ್ಕೂ ಹೆಚ್ಚು ಕುಟುಂಬಗಳು ಹೊಂದಿರುವ ಬಾವಿಗಳಿಗೆ ಮಾತ್ರವಲ್ಲದೆ ಸಮುದ್ರದ ಉಪ್ಪು ನೀರು ನದಿ, ಹೊಳೆಗೂ ಸೇರುತ್ತಿದೆ.
10ವರ್ಷಗಳಿಂದ ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಶಾಸಕರು, ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೊರೊನಾ ಕಾಟದಿಂದ ಜನ ದಿನಸಿಗಾಗಿ ಪರಿತಪಿಸುತ್ತಿದ್ದರೆ, ಇಲ್ಲಿನವರು ಮಾತ್ರ ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿಯುವ ಸ್ಥಿತಿಗೆ ತಲುಪಿದ್ದಾರೆ.