ಹೊನ್ನಾವರ:ಆಂಧ್ರ ಪ್ರದೇಶದಿಂದ ಪ್ರವಾಸಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳ ಬಸ್ಸು ಗೇರುಸೊಪ್ಪಾ ಸಮೀಪ ಕಂದಕಕ್ಕೆ ಬಿದ್ದು ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಪ್ರವಾಸಕ್ಕೆಂದು ಆಗಮಿಸಿದ್ದ ಶಾಲಾ ಬಸ್ಸು ಕಂದಕಕ್ಕೆ ಬಿದ್ದು ವಿದ್ಯಾರ್ಥಿ ಸಾವು, ಹಲವರಿಗೆ ಗಾಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಸೂಳೆಮರ್ಕಿ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಆಂಧ್ರ ಪ್ರದೇಶದ ಕದ್ರಿ ಅನಂತಪುರ ಜಿಲ್ಲೆಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಸಿಗಂದೂರು, ಜೋಗ, ಮುರುಡೇಶ್ವರ ಸೇರಿದಂತೆ ವಿವಿಧ ಐತಿಹಾಸಿಕ ಪ್ರದೇಶ ವೀಕ್ಷಿಸಲು ಬಸ್ ಮೂಲಕ ಆಗಮಿಸಿದ್ದರು. ಒಟ್ಟು 44 ವಿದ್ಯಾರ್ಥಿಗಳು, 9 ಜನ ಶಿಕ್ಷಕರು 4 ಅಡುಗೆ ಸಿಬ್ಬಂದಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ವಿದ್ಯಾರ್ಥಿ ಟಿ.ಭಾಷಾ ಫಕ್ರುದ್ದೀನ್ (14) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿ. ಇನ್ನು ಗಂಭೀರ ಗಾಯಗೊಂಡ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಮಣಿಪಾಲ, ಉಡುಪಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಸಕ್ಕೆಂದು ಆಗಮಿಸಿದ್ದ ಶಾಲಾ ಬಸ್ಸು ಕಂದಕಕ್ಕೆ ಬಿದ್ದು ವಿದ್ಯಾರ್ಥಿ ಸಾವು, ಹಲವರಿಗೆ ಗಾಯ ಗಾಯಗೊಂಡ ಬಹುತೇಕರು ಆಂಧ್ರ ಪ್ರದೇಶ ಹಾಗೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ, ಬಂಗಾರಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ ಭೇಟಿ ನೀಡಿದ್ದಾರೆ. ಜೊತೆಗೆ ತಾಲೂಕು ದಂಡಾದಿಕಾರಿ ವಿವೇಕ ಶೆಣ್ವೆ, ಎ.ಎಸ್.ಪಿ ನಿಖಿತಾ ಬುಳ್ಳಾವರ ಕೂಡ ಭೇಟಿ ನೀಡಿ ಸ್ಥಿತಿಗತಿ ವಿಚಾರಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದಲ್ಲದೇ ಗಾಯಾಳುವನ್ನು ರಕ್ಷಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. 6ಕ್ಕೂ ಹೆಚ್ಚು ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕ್ಷಣಾರ್ಧದಲ್ಲಿ ದಾಖಲಿಸುವಲ್ಲಿ ಆಂಬುಲೆನ್ಸ್ ಚಾಲಕರು ನೆರವಾಗಿರುವುದರಿಂದ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.