ಕಾರವಾರ:ದುರಸ್ತಿಗೆ ತಲುಪಿದ್ದ ಶಾಲಾ ಕೊಠಡಿಯ ಮೇಲ್ಛಾವಣಿಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಸಂಭವಿಸಬಹುದಾದ ಅನಾಹುತವೊಂದು ತಪ್ಪಿದೆ. ಈ ಘಟನೆ ನಡೆದಿದ್ದು ಕಾರವಾರದ ಬಾಡ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ.
ಈ ಶಾಲೆಯನ್ನು 1865ರಲ್ಲಿ ಪ್ರಾರಂಭಿಸಲಾಗಿದ್ದು, ಈಗ ಕುಸಿದು ಬಿದ್ದ ಕಟ್ಟಡವನ್ನು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಈ ಕಟ್ಟಡಗಳ ನಿರ್ವಹಣೆ ಸರಿಯಿಲ್ಲದ ಕಾರಣ ಕೊಠಡಿ ದುರಸ್ತಿಗೆ ಬಂದಿತ್ತು. ಆದ್ದರಿಂದ ಮಕ್ಕಳಿಗೆ ಆ ಕೊಠಡಿಯಲ್ಲಿ ಪಾಠ ಮಾಡುತ್ತಿರಲಿಲ್ಲ. ಆದರೆ ಅಪರೂಪಕ್ಕೊಮ್ಮೆ ವ್ಯಾಯಾಮ ಸೇರಿದಂತೆ ಇತರೆ ಚಟುವಟಿಕೆಗಳಿಗಾಗಿ ಮಕ್ಕಳು ತೆರಳುತ್ತಿದ್ದರು.
ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 30 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಶಾಲಾ ಕೊಠಡಿಯ ಮೇಲ್ಛಾವಣಿ ಹಾಳಾದ ಬಗ್ಗೆ 2017ರಿಂದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಈವರೆಗೂ ಸರಿಪಡಿಸುವ ಕೆಲಸವಾಗಿರಲಿಲ್ಲ. ಸದ್ಯ ಇರುವ ಕೊಠಡಿಗಳ ಮೇಲ್ಛಾವಣಿ ಕೂಡ ಹಾಳಾಗಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಿ ನಾಗ್ವೇಕರ್.
ಈ ಬಗ್ಗೆ ಮಾತನಾಡಿರುವ ಸ್ಥಳೀಯರು, ಭಾನುವಾರವಾಗಿರುವ ಕಾರಣ ಶಾಲಾ ಮಕ್ಕಳು ಶಾಲೆಗೆ ಬಾರದಿದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದೆ. ಶಾಲೆ ದುರಸ್ತಿಗೆ ತಲುಪಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಮೂರು ಬಾರಿ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ. ಆದರೆ ಯಾರೂ ಕೂಡ ಗಮನಹರಿಸಿಲ್ಲ. ನಮ್ಮ ಮಕ್ಕಳ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲದೆ, ಶಾಲೆಯ ಅಡುಗೆ ಕೋಣೆಯಲ್ಲಿಯೂ ಕೂಡ ನೀರು ಸೋರುತ್ತಿದೆ. ನಿರ್ವಹಣೆ ಇಲ್ಲದ ಕಾರಣ ಶಾಲೆಯಲ್ಲಿದ್ದ ಲಕ್ಷಾಂತರ ರೂ. ವೆಚ್ಚದ ಕಂಪ್ಯೂಟರ್ ಧೂಳು ಹಿಡಿಯುತ್ತಿದೆ. ಶಾಲೆಯ ಇನ್ನುಳಿದ ಕೊಠಡಿಗಳು ಶಿಥಿಲಗೊಂಡಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.