ಭಟ್ಕಳ:ಇನ್ಮುಂದೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರೇ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿ ಶಿಷ್ಯವೇತನಕ್ಕೆ ಬಿಡುಗಡೆಗೊಳಿಸುವ ನೆಪದಲ್ಲೂ ಹಣ ಲೂಟಿ ಮಾಡಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನಕ್ಕಾಗಿ 2018-2019ರಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಒಟ್ಟು 14 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಸರಿಯಾಗಿ ದಾಖಲೆಗಳನ್ನು ಸಲ್ಲಿಸದ ಮತ್ತು ತಾಂತ್ರಿಕತೆಯಿಂದ ತಪ್ಪು ದಾಖಲೆಗಳ ಸಲ್ಲಿಕೆಯ ಕಾರಣ ಇದರಲ್ಲಿ 2.68 ಲಕ್ಷ ವಿದ್ಯಾರ್ಥಿಗಳ ಅರ್ಜಿ ತಿರಸ್ಕೃತಗೊಂಡಿದ್ದವು. ಆಗಿರುವ ತೊಂದರೆಯನ್ನು ಸರಿಪಡಿಸಿಕೊಳ್ಳಲು ಮರು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿತ್ತು.
ತಾಲೂಕು ವಿಸ್ತೀರ್ಣಾಧಿಕಾರಿ (ಉಪವಿಭಾಗ) ಶಂಸುದ್ದೀನ ಅದೇ ರೀತಿ ಮರು ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆದಿದ್ದ ಭಟ್ಕಳದ ಇಮ್ತಿಯಾಜ್ ಹುಸೇನ್ ಎಂಬುವರ ಮಗಳ ಖಾತೆಯಿಂದ ಅಪರಿಚಿತನೋರ್ವ ₹12,600 ಎಗರಿಸಿದ್ದಾನೆ. ಅಪರಿಚಿತ ವ್ಯಕ್ತಿ (9986620964 ಸಂಖ್ಯೆಯಿಂದ) ಕರೆ ಮಾಡಿ ಅಲ್ಪಸಂಖ್ಯಾತರ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಕುರಿತು ಮಾಹಿತಿ ಪಡೆದಿದ್ದಾನೆ. ಇನ್ಮುಂದೆ ಈ ರೀತಿ ಆಗದಂತೆ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಯುವತಿ ಖಾತೆ ಸಂಖ್ಯೆ ಮತ್ತು ಮೊಬೈಲ್ಗೆ ಬಂದಿರುವ ಒಟಿಪಿ ಸಂಖ್ಯೆ ನೀಡಿದ್ದಾಳೆ. ಮಾಹಿತಿ ಹಂಚಿಕೊಂಡ ಕೆಲವೇ ಸೆಕೆಂಡ್ಗಳಲ್ಲಿ ಆಕೆಗೆ ಸತ್ಯಾಂಶ ತಿಳಿಯುವುದರೊಳಗೆ ಖಾತೆಗೆ ಕನ್ನ ಹಾಕಿದ್ದ. ವಿದ್ಯಾರ್ಥಿನಿಯ ತಂಗಿಗೂ ಸೇರಿ ಶಿರಸಿಯಲ್ಲಿ ಇಂತಹ 4 ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪಾರದರ್ಶಕತೆ ಕಾಪಾಡಿಕೊಳ್ಳಲು ಸರ್ಕಾರವೇ ಆನ್‍ಲೈನ್ ಮೂಲಕವೇ ಅರ್ಜಿ ಆಹ್ವಾನಿಸಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುತ್ತಿದೆ. ಕರೆ ಮಾಡುವ ಅಪರಿಚಿತರಿಗೆ ಯಾವುದೇ ವಿವರ ನೀಡಬಾರದು. ತಮಗೆ ಸಂಶಯ ಬಂದಲ್ಲಿ ಅಲ್ಪಸಂಖ್ಯಾತರ ಅರಿವು ಕೇಂದ್ರಗಳಿಗೆ ದೂರು ಕೊಡಿ. ಹಾಗೂ ಅಲ್ಲಿ ಬೇಕಾದ ಮಾಹಿತಿ ಪಡೆದುಕೊಳ್ಳಿ ಎಂದು ತಾಲೂಕು ವಿಸ್ತೀರ್ಣಾಧಿಕಾರಿ (ಉಪವಿಭಾಗ) ಶಂಸುದ್ದೀನ ಹೇಳಿದ್ದಾರೆ.