ಶಿರಸಿ :ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡ ಗ್ರಾಮ ಪಂಚಾಯತ್ ಕಾರಗದ್ದೆ ಗ್ರಾಮದ ಕಾಲು ಸಂಕದ ಅಕ್ಕಪಕ್ಕದ ಮಣ್ಣು ಕುಸಿದಿದ್ದು, ಕಾಲು ಸಂಕವೂ ಈಗ ಕೊಚ್ಚಿಹೋಗುವ ಆತಂಕ ಎದುರಾಗಿದೆ.
ಹಿಂದುಳಿದ ಮುಕ್ರಿ ಜನಾಂಗದ ಕುಟುಂಬಗಳನ್ನೂಳಗೊಂಡು 40 ಮನೆಗಳು ಇಲ್ಲಿವೆ. ಶಾಲೆ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿ ದಿನ 30ಕ್ಕೂ ಅಧಿಕ ಜನರು ಸಂಪರ್ಕಕ್ಕಾಗಿ ಈ ಕಾಲು ಸಂಕವನ್ನು ಬಳಸಿಕೊಳ್ಳುತ್ತಿದ್ದಾರೆ. ಮಣ್ಣು ಕುಸಿದಿದ್ದರಿಂದಾಗಿ ಸಂಚರಿಸಲು ಭಯವಾದರೂ ಅನಿವಾರ್ಯವಾಗಿ ಸ್ಥಳೀಯರು ಇಲ್ಲಿಯೇ ಸಾಗುವಂತಾಗಿದೆ.
ಅಪಾಯದ ಹಂತದಲ್ಲಿ ಕಾರಗದ್ದೆ ಸಂಕ ಒಂದೊಮ್ಮೆ ಈ ಕಾಲು ಸಂಕ ಕುಸಿದುಹೋದಲ್ಲಿ ವಾಹನ ಸಂಚರಿಸುವ ಮಾರ್ಗದ ಮೂಲಕ 3 ಕಿಮೀಗಳಷ್ಟು ನಡೆದು ಹೋಗಬೇಕಾಗಲಿದೆ. ಇಲ್ಲೊಂದು ಶಾಶ್ವತ ಕಾಲು ಸಂಕ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಕಳೆದ ವರ್ಷ ಆಗ್ರಹಿಸಿದ್ದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ 1 ಲಕ್ಷ ರೂ. ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಇಂಜಿನಿಯರ್ಗಳು ಕನಿಷ್ಟ 2.5 ಲಕ್ಷ ರೂ. ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ. ಇದರಿಂದಾಗಿ ಯೋಜನೆ ಹಾಗೇ ನೆನಗುದಿಗೆ ಬಿದ್ದಿದೆ.
'ಅಡಕೆ ಮರದ ದಿಮ್ಮಿಗಳನ್ನು ಬಳಸಿಕೊಂಡು ನಾವೇ ಕಾಲು ಸಂಕ ನಿರ್ಮಿಸಿಕೊಳ್ಳುತ್ತಿದ್ದೇವೆ. ಈಗ ಮಣ್ಣು ಕುಸಿದಿದ್ದರಿಂದ ರಿಪೇರಿ ಮಾಡುವುದು ಕಷ್ಟ. ನೆರೆ ಪರಿಹಾರದಲ್ಲಿ ಶಾಶ್ವತ ಸಂಕ ನಿರ್ಮಿಸಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.