ಕಾರವಾರ(ಉತ್ತರ ಕನ್ನಡ): ಯಾವುದೇ ಮನೆ, ಕಟ್ಟಡ ಅಥವಾ ಅಭಿವೃದ್ಧಿ ಕಾರ್ಯಗಳನ್ನ ಮಾಡಲು ಮರಳು ಅತ್ಯಗತ್ಯವಾಗಿದೆ. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಮರಳು ಸಿಗುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹಸಿರು ಪೀಠವು ಕರಾವಳಿ ನಿಯಂತ್ರಣ ವಲಯದಲ್ಲಿ ಮರಳುಗಾರಿಕೆ ನಿಷೇಧ ಹೇರಿರುವುದರಿಂದಾಗಿ ಅಭಿವೃದ್ಧಿ ಕಾರ್ಯಗಳೂ ಸಹ ಕುಂಠಿತವಾಗಿದ್ದು ಜನರು ಮರಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲಾಡಳಿತ ಮರಳಿನ ಬೇಡಿಕೆ ಪೂರೈಕೆಗಾಗಿ ಪರ್ಯಾಯ ಮಾರ್ಗ ಹುಡುಕಲು ಮುಂದಾಗಿದೆ.
ಕರಾವಳಿ ನಗರಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮರಳುಗಾರಿಕೆ ಬಂದ್ ಆಗಿರೋದು ದೊಡ್ಡ ದೊಡ್ಡ ಕಾಮಗಾರಿಗಳಿಗೆ ಅಡ್ಡಿಯುಂಟು ಮಾಡಿದೆ. ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಿಗೆ ಕರಾವಳಿ ಭಾಗದ ನದಿಗಳಲ್ಲಿ ತೆಗೆದ ಮರಳನ್ನೇ ಅಭಿವೃದ್ದಿ ಚಟುವಟಿಕೆಗಳಿಗೆ ಬಳಸಲು ಸಾಗಾಟ ಮಾಡಲಾಗುತ್ತಿತ್ತು. ಆದರೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠವು ಸಿಆರ್‌ಝೆಡ್ ವಲಯದಲ್ಲಿ ತೆಗೆದ ಮರಳನ್ನು ಮಾರಾಟ ಮಾಡದಂತೆ ಆದೇಶಿಸಿದ್ದ ಪರಿಣಾಮ ಜಿಲ್ಲಾಡಳಿತ ಮರಳುಗಾರಿಕೆ ಬಂದ್ ಮಾಡಿದೆ. ಇದರಿಂದಾಗಿ ಅಭಿವೃದ್ದಿ ಚಟುವಟಿಕೆಗಳು ಮರಳು ಸಿಗದೇ ಪರದಾಡುವಂತಾಗಿದ್ದು ಜನಸಾಮಾನ್ಯರಿಗೂ ಸಹ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಜಲಾಶಯ ಹಿನ್ನೀರಿನ ಮರಳು: ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗದ ಚಿಂತನೆಯಲ್ಲಿರುವ ಜಿಲ್ಲಾಡಳಿತ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿ ಹೊರತುಪಡಿಸಿ ಒಳನಾಡು ನದಿ ಪ್ರದೇಶ, ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಇರುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಮುಂದಾಗಿದೆ. ಇದರಿಂದ ಹಸಿರು ಪೀಠದ ಆದೇಶ ಉಲ್ಲಂಘಿಸದೇ ಅಗತ್ಯವಿರುವ ಮರಳು ಪೂರೈಕೆ ಸಾಧ್ಯವಾಗಲಿದ್ದು, ಈ ಕುರಿತು ಇರುವ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.