ಕಾರವಾರ:ಇಲ್ಲಿನವಾಣಿಜ್ಯ ಬಂದರಿಗೆ ಸರಕು ಸಾಗಣೆ ಹಡಗುಗಳು ಬಂದು ಹೋಗುವುದು ಸಾಮಾನ್ಯ. ಆದರೆ ಇಂದು ಕಾರವಾರ ಬಂದರಿಗೆ ಆಗಮಿಸಿದ್ದ ವಿಶಿಷ್ಟ ಹಡಗೊಂದು ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದ್ದು, ಮಹತ್ವದ ಸಂದೇಶವೊಂದನ್ನು ಸಾರುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಭಾರತ ಸರ್ಕಾರದ ಭೂ ವಿಜ್ಞಾನ ಇಲಾಖೆಗೆ ಸೇರಿದ ಕೊಚ್ಚಿಯ ಕಡಲ ವಿಜ್ಞಾನ ಸಂಶೋಧನೆಯ 'ಸಾಗರ ಸಂಪದ' ಎಂಬ ಹಡಗನ್ನು ಭೂ ವಿಜ್ಞಾನ ಸಚಿವಾಲಯದ ವತಿಯಿಂದ 'ಸ್ವಚ್ಛತೆಯೇ ಸೇವೆ' ಎಂಬ ಅಭಿಯಾನಕ್ಕೆ ನಿಯೋಜಿಸಲಾಗಿದೆ. ಈ ಹಡಗಿನ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿರುವ ದೇಶಗಳಲ್ಲಿ ಭಾರತ 12ನೇ ಸ್ಥಾನದಲ್ಲಿದ್ದು, ಇದು ಸಮುದ್ರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪರಿಣಾಮ ಸಮುದ್ರ ಜೀವಿಗಳಿಗೆ ಪ್ಲಾಸ್ಟಿಕ್ನಿಂದ ಸಾಕಷ್ಟು ಹಾನಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸಲು ಮುಂದಾಗಿರೋದು ಉತ್ತಮ ಕಾರ್ಯ. ಈ ಬಗ್ಗೆ ತಿಳಿದ ಪ್ರತಿಯೊಬ್ಬರು ಜಾಗೃತರಾಗಬೇಕು ಎನ್ನುತ್ತಾರೆ ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ.