ಕರ್ನಾಟಕ

karnataka

ETV Bharat / state

ದೇಶಪಾಂಡೆಗೆ ಕೈತಪ್ಪಿದ ಮಂತ್ರಿಗಿರಿ: ನಾಲ್ಕು ದಶಕದ ಬಳಿಕ ನಾಯಕತ್ವ ಬದಲಾವಣೆ

ಹಿರಿಯ ಕಾಂಗ್ರೆಸ್​ ನಾಯಕ ಆರ್​​.ವಿ.ದೇಶಪಾಂಡೆ ಅವರಿಗೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿಲ್ಲ.

rv-deshpande-did-not-get-ministerial-post-in-the-cabinet
ಆರ್.ವಿ.ದೇಶಪಾಂಡೆಗೆ ಕೈತಪ್ಪಿದ ಮಂತ್ರಿಗಿರಿ: 4 ದಶಕದ ಬಳಿಕ ಜಿಲ್ಲಾ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ..!

By

Published : May 28, 2023, 3:14 PM IST

ಕಾರವಾರ: ದಾಖಲೆಯ ಮತಗಳೊಂದಿಗೆ ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಮಂಕಾಳ ವೈದ್ಯ ಅವರಿಗೆ ಕೊನೆಗೂ ಮಂತ್ರಿ ಪದವಿ ಅರಸಿ ಬಂದಿದೆ. ಅದರಲ್ಲೂ ಅವರು ಬಯಸಿದ ಖಾತೆಯೇ ಸಿಕ್ಕಿರುವುದು ಜಿಲ್ಲೆಯ ಮೀನುಗಾರರ ಸಂತಸಕ್ಕೂ ಕಾರಣವಾಗಿದೆ. ಆದರೆ ಕಾಂಗ್ರೆಸ್​​ನ ಹಿರಿಯ ನಾಯಕ ಆರ್.ವಿ.ದೇಶಪಾಂಡೆಗೆ ಈ ಬಾರಿ ಮಂತ್ರಿಯಾಗುವ ಅವಕಾಶ ಕೈ ತಪ್ಪಿದ್ದು, ನಾಲ್ಕು ದಶಕಗಳ ಬಳಿಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಹೊಸ ಶಕೆ ಆರಂಭವಾಗಿದೆ.

ಮೀನುಗಾರ ಸಮುದಾಯದ ಮಂಕಾಳ.ಎಸ್.ವೈದ್ಯ ಅವರು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಖಾತೆ ಹಂಚಿಕೆ ಸಂಭಾವ್ಯ ಪಟ್ಟಿಯಲ್ಲಿ ಅವರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ನೀಡಲಾಗಿದೆ. ಒಂದೊಮ್ಮೆ ಇದೇ ಖಾತೆ ಲಭ್ಯವಾದಲ್ಲಿ ಜಿಲ್ಲೆಯಲ್ಲಿ ಆನಂದ್ ಅಸ್ನೋಟಿಕರ್ ಬಳಿಕ ಮಂಕಾಳ ವೈದ್ಯ ಅವರಿಗೆ ಮೀನುಗಾರಿಕೆ ಸಚಿವರಾಗುವ ಅದೃಷ್ಟ ಒಲಿದು ಬಂದಂತಾಗಿದೆ.

16 ವರ್ಷದ ಬಳಿಕ ಭಟ್ಕಳಕ್ಕೆ ಸಚಿವ ಸ್ಥಾನ:ಮಂಕಾಳ ವೈದ್ಯ ಅವರು ಮೀನುಗಾರ ಸಮುದಾಯದಿಂದ ಗೆದ್ದ ಕಾಂಗ್ರೆಸ್‌ನ ಏಕೈಕ ಶಾಸಕರು. ಇದರಿಂದ ಮಂತ್ರಿಯಾಗುವ ಅದೃಷ್ಟ ಖುಲಾಯಿಸಿದೆ. ಇದೀಗ ಭಟ್ಕಳ ಕ್ಷೇತ್ರಕ್ಕೆ 16 ವರ್ಷದ ಬಳಿಕ ಸಚಿವ ಸ್ಥಾನ ಲಭ್ಯವಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್.ಎಂ.ಯಾಹ್ಯಾ ಹಾಗೂ ಆರ್.ಎನ್.ನಾಯ್ಕ್​​ ಸಚಿವರಾಗಿದ್ದರು. ಆ ಬಳಿಕ 2006 ರಲ್ಲಿ ಬಿಜೆಪಿಯಿಂದ ಶಿವಾನಂದ ನಾಯ್ಕ ಸಚಿವರಾಗಿದ್ದರು.

ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ, ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರಿಗೆ ಬಹುತೇಕ ಮಂತ್ರಿಗಿರಿ ಖಚಿತ ಎಂದೇ ಹೇಳಲಾಗಿತ್ತು. ಆದರೆ ಹೈಕಮಾಂಡ್ ದೇಶಪಾಂಡೆ ಸೇರಿ ಹಲವು ಹಿರಿಯ ನಾಯಕರಿಗೆ ಕೊಕ್ ನೀಡಿದೆ. ಕಳೆದ ನಾಲ್ಕು ದಶಕಗಳಿಂದ ಜನತಾ ಪರಿವಾರ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಪ್ರಮುಖ ಖಾತೆ ನಿಭಾಯಿಸಿ, ವಿರೋಧ ಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅಲ್ಲದೆ ಹೈಕಮಾಂಡ್ ಮಟ್ಟದಲ್ಲಿಯೂ ಸಂಪರ್ಕ ಹೊಂದಿದ್ದ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ಕೂಡ ಮಾಡಿದ್ದರು. ಆದರೆ ಈ ಬಾರಿ ಸಂಪುಟದಿಂದ ಕೈ ಬಿಡಲಾಗಿದೆ.

ಪರ್ಯಾಯ ನಾಯಕತ್ವಕ್ಕೆ ಮಣೆ:ಕಳೆದ ನಾಲ್ಕು ದಶಕಗಳಿಂದ ಜನತಾ ಪರಿವಾರ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಚಿವರಾಗಿ ಅಧಿಕಾರ ನಡೆಸಿದ್ದ ಆರ್.ವಿ.ದೇಶಪಾಂಡೆ ತಮ್ಮದು ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದರು. ಮಂತ್ರಿಯಾಗುವ ನಿರೀಕ್ಷೆಯಲ್ಲಿ ಸ್ಪೀಕರ್ ಸ್ಥಾನಕ್ಕೂ ಹಿಂದೇಟು ಹಾಕಿದ್ದರು. ದೆಹಲಿಗೂ ತೆರಳಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ ಅವರಿಗೆ ಕೊನೆಗೂ ಸಚಿವ ಸ್ಥಾನ ಕೈ ತಪ್ಪಿದೆ. ಸದ್ಯ ಜಿಲ್ಲೆಯಲ್ಲಿ ದೇಶಪಾಂಡೆ ಅವರ ಸಮಕಾಲಿನ ನಾಯಕರು ಯಾರೂ ಇಲ್ಲದ ಕಾರಣ ಹೈಕಮಾಂಡ್ ಪರ್ಯಾಯ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಮಂಕಾಳ ವೈದ್ಯರಿಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ.

ಆರ್​​ವಿಡಿಗೆ ಮುಳುವಾದರೇ ಡಿಕೆಶಿ?:ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಆರ್.ವಿ. ದೇಶಪಾಂಡೆ ಡಿಕೆಶಿ ಜೊತೆ ಸಂಬಂಧ ಅಷ್ಟಕಷ್ಟೇ ಎನ್ನಲಾಗಿದೆ. ಭಾರತ್ ಜೋಡೊ ಯಾತ್ರೆ ವೇಳೆ ಡಿಕೆಶಿ​, ಜನರನ್ನು ಕರೆತರುವಂತೆ ಆರ್.ವಿ‌.ದೇಶಪಾಂಡೆಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಯಾತ್ರೆಗೆ ಜನರನ್ನು ಕರೆದೊಯ್ಯದ ಕಾರಣ ಡಿಕೆಶಿ‌ ಆರ್‌.ವಿ.ದೇಶಪಾಂಡೆ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿರುವ ಬ್ರಾಹ್ಮಣ ಸಮುದಾಯದ ದೇಶಪಾಂಡೆಗಿಂತ ಪ್ರಬಲವಾಗಿರುವ ಮೀನುಗಾರ ಸಮುದಾಯದ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ನೀಡಿದರೇ ಸೂಕ್ತ ಎಂಬ ಲೆಕ್ಕಾಚಾರ ಹಾಕಿ ನೀಡಿರುವುದು ಆರ್.ವಿ.ದೇಶಪಾಂಡೆಗೆ ಕೈತಪ್ಪುವಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:ಬಡತನದಿಂದ ಹೊಟೇಲ್ ಕೆಲಸಕ್ಕೆ ಸೇರಿದ್ದ ಮಂಕಾಳ ವೈದ್ಯ: ಸಮಾಜಸೇವೆಗೆ ಅರಸಿ ಬಂದ ಮಂತ್ರಿ ಪದವಿ..!

ABOUT THE AUTHOR

...view details