ಕಾರವಾರ (ಉತ್ತರ ಕನ್ನಡ):ಉತ್ತರ ಕನ್ನಡದ ಕರಾವಳಿಯಲ್ಲಿ ಮಳೆ ಜೋರಾದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಿಸುವ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ಅರೆಬರೆ ಮತ್ತು ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವ ಪರಿಣಾಮ, ಸದ್ಯ ಮಳೆ ಸುರಿಯುತ್ತಿದ್ದಂತೆ ಅಲ್ಲಲ್ಲಿ ಗುಡ್ಡಗಳಿಂದ ಬಂಡೆಗಲ್ಲುಗಳ ಹೆದ್ದಾರಿಯಲ್ಲಿ ಊರುಳಿ ಬೀಳುತ್ತಿವೆ. ಮತ್ತೆ ಕೆಲವು ಕಡೆಗಳಲ್ಲಿ ಗುಡ್ಡಗಳು ಬಾಯ್ತೆರೆದು ನಿಂತಂತೆ ಕಾಣಿಸುತ್ತಿವೆ. ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪ್ರಾಣ ಭೀತಿ ಕಾಡತೊಡಗಿದೆ.
ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಅಲ್ಲದೇ, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಹಾಗೆಯೇ ಬಿಡಲಾಗಿದೆ. ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇಲ್ಲವಾದರೂ ಇದೀಗ ಮಳೆಗಾಲದಲ್ಲಿ ಅಲ್ಲಲ್ಲಿ ಕುಸಿತವಾಗುತ್ತಿರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಪ್ರತಿಭಟನೆಯ ಎಚ್ಚರಿಕೆ:ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಅಪಾಯಕಾರಿ ರೀತಿಯಲ್ಲಿ ಕೊರೆದಿರುವ ಗುಡ್ಡಗಳಿಂದ ಮಣ್ಣು ಹಾಗೂ ಬಂಡೆಗಳು ಹೆದ್ದಾರಿಗೆ ಉರುಳಿ ಬೀಳುತ್ತಿವೆ. ಈ ವಾರದಲ್ಲಿಯೇ ಮೂರು ಕಡೆ ಬಂಡೆಗಳು ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ಜೋರಾದ ವೇಳೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಂಬಂಧಪಟ್ಟ ಕಂಪನಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಹೋರಾಟಗಾರ ಮಂಜುನಾಥ ಗೌಡ ಎಚ್ಚರಿಕೆ ನೀಡಿದರು.