ಪ್ರವಾಸಿಗರಾದ ಪ್ರವೀಣ ಕುಮಾರ ಹೊಸಂತೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಬೇಬಿ ಮೊಗೇರ್ ಮಾತನಾಡಿದರು. ಕಾರವಾರ : ಅದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಗಳ ಕಲೆ, ಸಂಸ್ಕೃತಿ ಬಿಂಬಿಸುವ ಶಿಲ್ಪಕಲಾಕೃತಿಗಳ ವನ. ಹೆದ್ದಾರಿಗೆ ಹೊಂದಿಕೊಂಡು ಕಡಲತೀರದಲ್ಲೇ ಈ ವನ ಇರುವುದರಿಂದ ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ತೆರಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾದ ನಿರ್ವಹಣೆಯ ಕೊರತೆಯಿಂದ ಪ್ರವಾಸಿಗರ ಆಕರ್ಷಣೆಯ ತಾಣ ತನ್ನ ಕಳೆ ಕಳೆದುಕೊಳ್ಳುತ್ತಿದೆ.
ಕಾರವಾರದಲ್ಲಿರುವ ರಾಕ್‌ಗಾರ್ಡನ್ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೀಡಾಗಿ ದುಸ್ಥಿತಿ ತಲುಪಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಹೊಂದಿಕೊಂಡೇ ಇರುವ ರಾಕ್ ಗಾರ್ಡನ್ ವನವನ್ನು ಜಿಲ್ಲೆಯ ಬುಡಕಟ್ಟು ಸಮುದಾಯಗಳ ಜೀವನಶೈಲಿಯನ್ನು ತಿಳಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಸುಮಾರು 3 ಕೋಟಿ ರೂ ವೆಚ್ಚದಲ್ಲಿ 2018ರಲ್ಲಿ ಇದರ ನಿರ್ಮಾಣವಾಗಿತ್ತು. ಒಂದು ಕಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಸುಂದರ ಪ್ರವಾಸಿ ತಾಣವೂ ಆಗಿತ್ತು.
ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರ್ವಹಣೆ ಕಾಣದೆ ಎಲ್ಲೆಂದರಲ್ಲಿ ಗಿಡ-ಗಂಟಿಗಳು ಬೆಳೆದುಕೊಂಡಿವೆ. ಕಲಾಕೃತಿಗಳೂ ಬಣ್ಣ ಕಳೆದುಕೊಂಡಿವೆ. ಕೆಲವೊಂದು ಕಲಾಕೃತಿಗಳಿಗೆ ಹಾನಿಯಾಗಿದೆ. ಸರಿಪಡಿಸುವ ಕೆಲಸ ನಡೆಯದೆ ಪ್ರವಾಸಿಗರೂ ಇದರತ್ತ ಮುಖಮಾಡುತ್ತಿಲ್ಲ.
ರಾಕ್‌ಗಾರ್ಡನ್ ಉದ್ಘಾಟನೆಯಾದ ವರ್ಷದಲ್ಲೇ ಲಕ್ಷಾಂತರ ರೂಪಾಯಿ ಆದಾಯ ತಂದುಕೊಟ್ಟಿತ್ತು. ಬಳಿಕ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಿದ್ದು 2020ರ ಬಳಿಕ ಚಂಡಮಾರುತ, ಕೊರೊನಾ ಕಾರಣದಿಂದ ಬಂದ್ ಆಗಿ ಅಂದ ಕಳೆದುಕೊಳ್ಳುವಂತಾಯಿತು. ಅದಾದ ಬಳಿಕ ಪ್ರವಾಸಿಗರ ಆಗಮನ ಪ್ರಾರಂಭವಾದರೂ ರಾಕ್‌ಗಾರ್ಡನ್ ಜವಾಬ್ದಾರಿ ಹೊತ್ತಿದ್ದ ಸಂಸ್ಥೆ ನಿರ್ವಹಣೆ ಮಾಡದೇ ಶಿಲ್ಪಕಲಾಕೃತಿಗಳು ಹಾಳಾಗುವಂತಾಗಿದೆ. ಇದೀಗ ಅಕ್ಟೋಬರ್ ರಜೆಗಳು ಆರಂಭವಾಗಲಿದ್ದು, ಸಂಬಂಧಪಟ್ಟವರು ಸೂಕ್ತ ನಿರ್ವಹಣೆ ಕೈಗೊಳ್ಳಬೇಕು ಅನ್ನೋದು ಸ್ಥಳೀಯರ ಒತ್ತಾಯ.
ಅಧಿಕಾರಿಗಳ ಪ್ರತಿಕ್ರಿಯೆ: "ಸದ್ಯ ರಾಕ್‌ಗಾರ್ಡನ್ ನಿರ್ವಹಣೆ ನಮ್ಮ ಇಲಾಖೆಯಲ್ಲಿಯೇ ಇದೆ. ಮಾರ್ಚ್ನಲ್ಲಿ ಟೆಂಡರ್ ಅವಧಿ ಮುಗಿದಿದೆ. ಅದರ ನಂತರ ಪ್ರವಾಸೋದ್ಯಮ ಇಲಾಖೆಯವರಾದ ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಕೆಲವು ಕಾಮಗಾರಿಗಳನ್ನು ಮಾಡಿದ್ದೇವೆ. ಮಳೆಗಾಲದ ಕಾರಣಕ್ಕೆ ಕಾಮಗಾರಿ ಮತ್ತೆ ನಿಧಾನ ಆಗಿದೆ. ಸ್ಥಳ ತನಿಖೆ ಮಾಡಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದೇನು ಮಾಡಬೇಕೆಂದು ಡಿಸೈಡ್ ಮಾಡುತ್ತೇವೆ. ಈಗ ಬಜೆಟ್ ಕೊರತೆ ಇದೆ. ನಮ್ಮ ಸಮಿತಿಯಲ್ಲಿ ಅಷ್ಟೊಂದು ಬಜೆಟ್ ಇಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಬೇಕು ಅಥವಾ ಹಣವನ್ನು ಹೆಡ್ ಆಫೀಸ್ನಿಂದಲೇ ತರಿಸಿಕೊಳ್ಳಬೇಕಾ? ಎಂಬುದಕ್ಕೆ ಒಂದು ಲೆಟರ್ ಹಾಕಬೇಕು. ಸಿಬ್ಬಂದಿಯ ಕೊರತೆಯೂ ಇದೆ. ಹಂತ ಹಂತವಾಗಿ ನಿರ್ವಹಣೆ ಕಾರ್ಯ ಕೈಗೊಂಡು ರಾಕ್‌ಗಾರ್ಡನ್ ಸರಿಪಡಿಸುತ್ತೇವೆ" ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಬೇಬಿ ಮೊಗೇರ್ ತಿಳಿಸಿದರು.
ಇದನ್ನೂ ಓದಿ:ಕಾರವಾರ: ಅಂದ ಕಳೆದುಕೊಂಡ ರಾಕ್ ಗಾರ್ಡನ್.. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಪ್ರವಾಸಿಗರ ಬೇಸರ