ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಕ್ ಗಾರ್ಡನ್ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸರಿಯಾದ ನಿರ್ವಹಣೆ ಇಲ್ಲದೆ ತನ್ನ ಅಂದವನ್ನು ಕಳೆದುಕೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದು ಕಾಲದಲ್ಲಿ ಸಾವಿರಾರು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದ್ದ ರಾಕ್ ಗಾರ್ಡನ್ನತ್ತ ಇದೀಗ ಪ್ರವಾಸಿಗರೇ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ.
ಅಂದ ಕಳೆದುಕೊಂಡ ರಾಕ್ ಗಾರ್ಡನ್ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಕಳೆದ 2018ರಲ್ಲಿ ರಾಕ್ಗಾರ್ಡನ್ ನಿರ್ಮಾಣವಾಗಿತ್ತು. ಸುಮಾರು 3 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳನ್ನ ರಚಿಸಿ ಸ್ಥಾಪಿಸಲಾಗಿತ್ತು.
ಕೋಟೆಯ ಮಾದರಿಯಲ್ಲಿ ಸುತ್ತಲೂ ಕಲ್ಲುಗಳನ್ನೇ ಬಳಸಿ ನಿರ್ಮಿಸಲಾಗಿದ್ದ ಈ ರಾಕ್ ಗಾರ್ಡನ್ ದೂರದಿಂದಲೇ ಪ್ರವಾಸಿಗರನ್ನ ಸೆಳೆಯುವಂತೆ ನಿರ್ಮಾಣವಾಗಿತ್ತು. ಉದ್ಘಾಟನೆಯಾದ ವರ್ಷದಲ್ಲೇ ಕೋಟ್ಯಂತರ ರೂಪಾಯಿ ಆದಾಯವನ್ನೂ ತಂದುಕೊಟ್ಟಿತ್ತು.
ಅಂದ ಕಳೆದುಕೊಂಡ ರಾಕ್ಗಾರ್ಡನ್..ಬಳಿಕ ರಾಕ್ ಗಾರ್ಡನ್ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಿದ್ದು, ಈ ನಡುವೆ 2020ರಲ್ಲಿ ಅಪ್ಪಳಿಸಿದ ಚಂಡಮಾರುತ ಹಾಗೂ ಕೊರೊನಾ ಕಾರಣದಿಂದಲೂ ರಾಕ್ಗಾರ್ಡನ್ ಬಂದ್ ಆಗಿತ್ತು. ಕೋವಿಡ್ ನಿಯಮಗಳನ್ನ ಸಡಿಲಿಕೆ ಮಾಡಿದ ಬಳಿಕವೂ ಸೂಕ್ತ ನಿರ್ವಹಣೆ ಮಾಡದ ಕಾರಣ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡಿವೆ. ಹೀಗಾಗಿ, ರಾಕ್ ಗಾರ್ಡನ್ ಅಂದ ಕಳೆದುಕೊಳ್ಳುವಂತಾಗಿದೆ.
ಈ ರಾಕ್ಗಾರ್ಡನ್ ಪ್ರಾರಂಭಗೊಂಡ 2018-19ರಲ್ಲಿ ಸುಮಾರು 2.13 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2019-20ರಲ್ಲಿ 1.48 ಲಕ್ಷ ಹಾಗೂ ಕೊರೊನಾ ಮೊದಲನೆಯ ಅಲೆಯ ಬಳಿಕ 2020-21ರಲ್ಲಿ 24 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಅಂಕಿ-ಅಂಶಗಳ ಪ್ರಕಾರ, ಕೋವಿಡ್ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿದ್ದರಿಂದ ಸಾಕಷ್ಟು ಆದಾಯವನ್ನ ತಂದುಕೊಟ್ಟಿದೆ.
ಇಷ್ಟಾದರೂ ರಾಕ್ಗಾರ್ಡನ್ ನಿರ್ವಹಣೆ ಮಾಡುವವರು ಕಲಾಕೃತಿಗಳಿಗೆ ಪೇಂಟಿಂಗ್ ಮಾಡದೇ, ಬೆಳೆದಿರುವ ಕಳೆಹುಲ್ಲು ತೆರವುಗೊಳಿಸದೇ ನಿರ್ಲಕ್ಷ್ಯವಹಿಸಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ರಾಕ್ ಗಾರ್ಡನ್ ನಿರ್ವಹಣಾ ಕೆಲಸಕ್ಕೆ ಕೆಲ ಹಳೆಯ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ. ಆದರೆ, ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ ಪ್ರವಾಸಿಗರಿಗೆ ರಾಕ್ ಗಾರ್ಡನ್ ವೀಕ್ಷಣೆಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಓದಿ:ಅಧಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ, ಜಂಬ ಪಡುವ ಅಗತ್ಯ ಇಲ್ಲ: ಸಿದ್ದರಾಮಯ್ಯ