ಶಿರಸಿ:ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಸ್ಟಾರ್ ಪ್ರಚಾರಕರ ಸದ್ದು ಜೋರಾಗಿದೆ. ಶಿರಸಿಯಲ್ಲಿ ಬಿಜೆಪಿ ವಕ್ತಾರೆ ಹಾಗೂ ನಟಿ ಮಾಳವಿಕಾ ಅವಿನಾಶ್ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ರೋಡ್ ಶೋದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು. ಆದರೆ, ರೋಡ್ ಶೋಗೆ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದಿರುವ ಕಾರಣ ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು.
ಮೈಕ್ ಸಿಕ್ಕರೆ ಮಾರುದ್ದ ಭಾಷಣ ಮಾಡೋ ಹೆಗಡೆ ಗಪ್‌ಚುಪ್ ಆಗಿದ್ದೇಕೆ? - etv bharat
ಸತತ 5 ಬಾರಿ ಗೆಲುವು ಸಾಧಿಸಿ 6ನೇ ಬಾರಿಗೆ ಲೋಕಸಭೆ ಪ್ರವೇಶಿಸಲು ಸಜ್ಜಾಗಿರುವ ಅನಂತಕುಮಾರ್ ಹೆಗಡೆ ಇದೀಗ ಪ್ರಚಾರ ಭರಾಟೆಯಲ್ಲಿ ತೊಡಗಿದ್ದಾರೆ. ಆದರೆ, ಇವತ್ತು ತವರೂರಾದ ಶಿರಸಿಯಲ್ಲೇ ಕಾರ್ಯಕರ್ತರ ನಿರುತ್ಸಾಹ ಕಂಡು ಬೆಸ್ತು ಬಿದ್ದರು.
ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ, ಶಾಸಕ ವಿಶ್ವೇಶ್ವರ ಕಾಗೇರಿ ಸೇರಿದ್ದ ರೋಡ್ ಶೋದಲ್ಲಿ ಜನರ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಹೆಗಡೆ ಸಿಟ್ಟಾದರು. ಮೈಕ್ ಸಿಕ್ಕರೆ ಸಾಕು, ತಮ್ಮ ವಾಗ್ಜರಿಯಿಂದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದ ಹೆಗಡೆ, ರೋಡ್ ಶೋದಲ್ಲಿ ಗಪ್ ಚುಪ್ ಆಗಿಬಿಟ್ಟರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೆಲವೇ ಪದಗಳಲ್ಲಿ ಹೇಳಿಕೆ ನೀಡಿ ಜಾರಿಕೊಂಡರು. ದೇವರು ಹಾಗೂ ಜನತೆಯ ಆಶೀರ್ವಾದವಿದ್ದರೆ ಬಿಜೆಪಿ ಬಹುಮತದಿಂದ ಗೆಲ್ಲುತ್ತೆ ಅಂತ ಹೇಳಿ ಮಾತಿಗೆ ವಿರಾಮಕೊಟ್ಟರು.
ಇನ್ನೊಂದೆಡೆ, ರೋಡ್ ಶೋಗೆ ತಡವಾಗಿ ಆಗಮಿಸಿದ ಮಾಳವಿಕಾ, ಅರ್ಧ ಗಂಟೆಯೂ ನಿಲ್ಲಲಿಲ್ಲ. ಮೂರು ಕಿಮೀ ಸುತ್ತಿ ಮತಯಾಚನೆ ಮಾಡಬೇಕಿದ್ದ ಅವರು ಕೆಲವೇ ಹೊತ್ತಲ್ಲಿ ತಮ್ಮ ಕಾರು ಹತ್ತಿ ಹೊರಟು ಹೋದರು.