ಕದ್ರಾ ನಿವಾಸಿ ಮಹೇಂದ್ರ, ಸ್ಥಳೀಯರಾದ ಮಹೇಶ್ ನಾಯಕ ಹಾಗೂ ಶಾಸಕ ಸತೀಶ್ ಶೈಲ್ ಅವರು ಮಾತನಾಡಿದರು ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಎಲ್ಲ ನದಿಗಳು ತುಂಬಿ ಹರಿಯಲಾರಂಭಿಸಿವೆ. ಕಾಳಿ ನದಿಗೆ ನಿರಂತರವಾಗಿ ನೀರು ಹರಿದುಬರುತ್ತಿರುವ ಕಾರಣ, ಕದ್ರಾ ಜಲಾಶಯದಿಂದ ಮೂರನೇ ದಿನವೂ ನೀರು ಹೊರಬಿಡಲಾಗಿದೆ. ಬೊಮ್ಮನಳ್ಳಿ ಜಲಾಶಯದಿಂದಲೂ ನೀರು ಹೊರಬಿಡುವ ಮುನ್ಸೂಚನೆ ನೀಡಿರುವುದು ಇದೀಗ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಕಳೆದ ಕೆಲ ದಿನಗಳಿಂದ ಉತ್ತರಕನ್ನಡದಲ್ಲಿ ಗಾಳಿ ಸಹಿತ ಭಾರಿ ಮಳೆ ಮುಂದುವರಿದಿದೆ. ಪರಿಣಾಮ ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಈಗಾಗಲೇ ಹೊನ್ನಾವರದಲ್ಲಿ ಶರಾವತಿ ನದಿ ತೀರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ. ಅಲ್ಲದೆ ಗಾಳಿ, ಮಳೆಯಾದ ಕಾರಣ ಕುಮಟಾ ಪಟ್ಟಣದಲ್ಲಿ ಗಂಗಾಧರ ಗೌಡ ಹಾಗೂ ಗಣೇಶ ಗೌಡ ಎಂಬುವರ ಮನೆ ಮೇಲೆ ಬೃಹತ್ ಆಲದ ಮರ ಬಿದ್ದು ಹಾನಿಯಾಗಿದೆ.
ಜೊಯೀಡಾದ ಕ್ಯಾಸಲ್ ರಾಕ್ ಬಳಿ ಸೇತುವೆಯೊಂದು ಮುಳುಗಡೆಯಾಗಿ ಸಂಚಾರಕ್ಕೆ ಬೋಟ್ ಬಳಸಲಾಗುತ್ತಿದೆ. ಇನ್ನು, ಹೊನ್ನಾವರದಲ್ಲಿ ಭಾಸ್ಕೇರಿ ಹಾಗೂ ಗುಂಡಬಾಳ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ತೀರ ಪ್ರದೇಶದ ನಿವಾಸಿಗಳಿಗೆ ನೆರೆ ಆತಂಕ ಎದುರಾಗಿದೆ. ಈಗಾಗಲೇ ಗುಂಡಬಾಳ, ಚಿಕ್ಕನಕೋಡು, ಹುಡಗೋಡು, ಹಡಿನ್‌ಬಾಳ ಭಾಗದ ಮನೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ.
ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು ಗುಂಡಬಾಳ ಗ್ರಾಮದ ಎರಡು ಮನೆಗಳ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನು ಕಾಳಿ ನದಿ ಪ್ರದೇಶ ವ್ಯಾಪ್ತಿಯಲ್ಲಿಯೂ ವ್ಯಾಪಕವಾಗಿ ಮಳೆಯಾದ ಕಾರಣ, ಕದ್ರಾ ಜಲಾಶಯದಿಂದ ಮೂರನೇ ದಿನವೂ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ನದಿ ತೀರ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಕದ್ರಾದ ಮಹಮಾಯ ದೇವಿ ದೇವಾಲಯ ಜಲಾವೃತಗೊಂಡಿದ್ದು, ತಗ್ಗು ಪ್ರದೇಶದ ಜಮೀನುಗಳು ಕೂಡ ಜಲಾವೃತಗೊಂಡು ಜನ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಕೆಪಿಸಿಯವರು ಮನಸ್ಸಿಗೆ ಬಂದಂತೆ ನೀರು ಬಿಡುತ್ತಾರೆ. ಈ ಕಾರಣದಿಂದಲೇ ಕಳೆದ ಹಲವು ವರ್ಷಗಳಿಂದ ಪ್ರವಾಹ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಕನ್ನಡದಲ್ಲಿ ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿ ಕದ್ರಾದ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ:ಇನ್ನು, ನೆರೆಹಾನಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹಿಸಿ ಒಮ್ಮೆಲೆ ಬಿಡದಂತೆ ಎಚ್ಚರಿಕೆ ನೀಡಿದೆ. ಈಗಾಗಲೇ ಆಯಾ ಜಲಾಶಯಗಳಿಗೆ ಗುರಿ ನೀಡಿ ಗರಿಷ್ಠ ಮಟ್ಟ ತಲುಪುವ ಹಂತಕ್ಕೆ ಬಂದ ತಕ್ಷಣ ನಿಧಾನವಾಗಿ ನದಿಗೆ ನೀರು ಹರಿ ಬಿಟ್ಟು ಪ್ರವಾಹ ಎದುರಾಗದಂತೆ ತಡೆಯಲು ಸೂಚನೆ ನೀಡಲಾಗಿದೆ. ಈ ಸಂಬಂಧ ಶಾಸಕ ಸತೀಶ್ ಸೈಲ್ ಕೂಡ ಕದ್ರಾದ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಭಾರಿ ಪ್ರವಾಹವಾಗದಂತೆ ತಡೆಯಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರವಾಹ ಎದುರಾದಲ್ಲಿ ಪರಿಹಾರೋಪಾಯವಾಗಿ ದೋಣಿ ಹಾಗೂ ರಕ್ಷಣಾ ಸಿಬ್ಬಂದಿ, ನಿರಾಶ್ರಿತರಿಗೆ ಕಾಳಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ನದಿ ತೀರದ ಜನರಿಗೆ ಈ ಬಾರಿಯೂ ಪ್ರವಾಹದ ಭೀತಿ: ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಆರ್ಭಟ ನಿರಂತರವಾಗಿ ಮುಂದುವರಿದಿದ್ದು, ನದಿಗಳು ಕೂಡ ಉಕ್ಕಿ ಹರಿಯಲಾರಂಭಿಸಿವೆ. ಪರಿಣಾಮ ನದಿ ತೀರದ ಜನರಿಗೆ ಈ ಬಾರಿಯೂ ಪ್ರವಾಹದ ಭೀತಿ ಎದುರಾಗಿದೆ. ಇದರ ನಡುವೆ ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿ ಸಾಕಷ್ಟು ಹಾನಿಯಾಗಿದ್ದು, ಇನ್ನು ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಉತ್ತರಕನ್ನಡದಲ್ಲಿ ಅಬ್ಬರಿಸುತ್ತಿರುವ ಮಳೆ: ಗುಡ್ಡ ಕುಸಿತ.. ಮನೆ-ಜಮೀನುಗಳಿಗೆ ನುಗ್ಗುತ್ತಿರುವ ನೀರು