ಉತ್ತರ ಕನ್ನಡ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗುತ್ತಲೇ ಇದೆ. ಕಳೆದ ಕೆಲ ದಿನಗಳ ಹಿಂದೆ ವಾರಗಳ ಕಾಲ ಸುರಿದು ದೊಡ್ಡ ಮಟ್ಟದ ಹಾನಿ ಸೃಷ್ಟಿಸಿದ್ದ ಮಳೆ ಬಳಿಕ ಕೊಂಚ ಬಿಡುವು ನೀಡಿತ್ತು. ಆದರೆ ಇದೀಗ ಮತ್ತೆ ಮಳೆ ಅಬ್ಬರ ಜೋರಾಗಿದೆ.
ಜಿಲ್ಲೆಯ ಘಟ್ಟದ ಮೇಲ್ಭಾಗದ ಜೋಯಿಡಾ, ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ಕರಾವಳಿ ತಾಲ್ಲೂಕುಗಳಲ್ಲಿ ದಿನವಿಡಿ ಎಡಬಿಡದೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಹೆಚ್ಚಾಗಿ ನೀರು ಹರಿದು ಬರಲಾರಂಭಿಸಿದೆ. ಇದೇ ಕಾರಣಕ್ಕೆ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳು ಭರ್ತಿಯ ಹಂತಕ್ಕೆ ಬಂದಿವೆ.
ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ತುಂಬಿದ ಡ್ಯಾಂಗಳು ; ನದಿ ಪಾತ್ರದ ಜನರಲ್ಲಿ ಹೆಚ್ಚಿದ ಆತಂಕ ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ಹಾಗೂ ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ. ಪರಿಣಾಮ ಕಾಳಿ ನದಿ ತೀರದ ಮಲ್ಲಾಪುರ ಚರ್ಚ್ ವಾಡ, ಕದ್ರಾ, ಮಹಮ್ಮಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ನೀರು ತುಂಬಿ ನೆರೆಯಂತಾಗಿದೆ. ಅಲ್ಲದೆ ಜಲಾಶಯಗಳಿಂದ ನಿರಂತರವಾಗಿ ನೀರು ಹೊರ ಬಿಡುತ್ತಿರುವ ಕಾರಣ ಇದೀಗ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಇನ್ನು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಕಡಲತೀರಗಳಲ್ಲಿ ಮೀನುಗಾರರ ಬಲೆ, ಬೋಟ್‌ಗಳು ಕೊಚ್ಚಿ ಹೋಗಿವೆ. ಜಿಲ್ಲೆಯಾದ್ಯಂತ 18 ಮನೆಗಳು ಸಂಪೂರ್ಣ ಕುಸಿದಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಲ್ಲದೆ ಮಳೆಯಿಂದಾಗಿ ಯಲ್ಲಾಪುರ ಹಾಗೂ ಶಿರಸಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವರುಣನ ಆರ್ಭಟಕ್ಕೆ ಕರಾವಳಿ ತತ್ತರ; ರಕ್ಕಸದಲೆಗಳಿಗೆ ಕೊಚ್ಚಿ ಹೋಗ್ತಿದೆ ಕಡಲತೀರ
2019ರಲ್ಲಿ ಪ್ರವಾಹ ಸೃಷ್ಟಿಯಾದ ಕಾರಣ ಜಲಾಶಯಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು, ನೀರಿನ ಒಳ ಹರಿವು ಆಧರಿಸಿ ಕದ್ರಾ ಸೇರಿದಂತೆ ಇತರೆ ಜಲಾಶಗಳಿಂದ ಹಂತ ಹಂತವಾಗಿ ನೀರು ಹೊರ ಬಿಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಒಟ್ಟಾರೆ ಉತ್ತರಕನ್ನಡದಲ್ಲಿ ವರುಣನ ಅಬ್ಬರದಿಂದಾಗಿ ಜಲಾಶಗಳು ತುಂಬುವ ಹಂತಕ್ಕೆ ತಲುಪಿವೆ. ಜು.24ರವರೆಗೂ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನದಿ ತೀರದ ಜನರಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ.