ಕಾರವಾರ (ಉತ್ತರ ಕನ್ನಡ): ಘಟ್ಟದ ಮೇಲ್ಬಾಗದಿಂದ ಹರಿದು ಕರಾವಳಿ ಭಾಗದ ನೂರಾರು ಗ್ರಾಮಗಳ ಜನರ ದಾಹ ತಣಿಸುವ ಗಂಗಾವಳಿ ನದಿ ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆಗೆ ವರ್ಷವಿಡೀ ನೀರು ಪೂರೈಸುವ ಜೀವಜಲ ಕೂಡ ಹೌದು. ಆದರೆ ಕಳೆದ ಕೆಲದಿನಗಳಿಂದ ಈ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ನದಿ ನೀರನ್ನೇ ನಂಬಿದ್ದ ಗ್ರಾಮಗಳ ಜನರು ಇದೀಗ ಕಂಗಾಲಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ನಡುವೆ ಹರಿದು ಅರಬ್ಬಿ ಸಮುದ್ರ ಸೇರುವ ಗಂಗಾವಳಿ ನದಿ ನೀರು ಇದೀಗ ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದೆ. ಕಳೆದ ಒಂದು ವಾರದಿಂದ ಏಕಾಏಕಿ ಬಣ್ಣ ಬದಲಾಗಿದೆ. ಮಳೆ ಇಲ್ಲದಿದ್ದರೂ ವರ್ಷವಿಡೀ ಹರಿಯುತ್ತಿದ್ದ ಗಂಗಾವಳಿ ನದಿ ಕಳೆದ ಕೆಲ ವರ್ಷಗಳಿಂದ ಹರಿವು ತಗ್ಗಿಸಿಕೊಂಡಿತ್ತು.
ಹಸಿರು ಬಣ್ಣಕ್ಕೆ ತಿರುಗಿದ ಗಂಗಾವಳಿ ನದಿ ಇಷ್ಟಾದರೂ ಕೂಡ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಹೆಗ್ಗಾರ, ಕಲ್ಲೇಶ್ವರ, ಶೇವಕಾರ, ಗುಳ್ಳಾಪುರ, ಡೋಂಗ್ರಿ ಭಾಗಗಳಲ್ಲಿ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನ ಮೇಲ್ಬಾಗದಲ್ಲಿ ಹಸಿರಿನ ಪಾಚಿ ಕಟ್ಟಿಕೊಂಡಿದ್ದು ನದಿಗೆ ನದಿಯೇ ಹಸಿರಾಗಿ ಕಾಣಲಾರಂಭಿಸಿದೆ. ಕಳೆದ 10 ವರ್ಷಗಳ ಹಿಂದೆ ಇದೇ ರೀತಿ ನೀರು ಹಸಿರುಗಟ್ಟಿದ್ದರಿಂದ ಈ ಭಾಗದಲ್ಲಿ ಚಿಕುನ್ ಗುನ್ಯಾ, ಡೆಂಘೀ ನಂತಹ ಕಾಯಿಲೆ ಬಂದಿದ್ದವು. ಈಗಾಗಲೇ ಕೊರೊನಾದಿಂದ ಕಂಗೆಟ್ಟಿರುವ ನಮಗೆ ಈ ರೀತಿ ನದಿಯಲ್ಲಾಗಿರುವ ಬದಲಾವಣೆ ಆತಂಕ ತಂದಿದ್ದು ಕೂಡಲೇ ನೀರನ್ನು ಪರೀಕ್ಷೆಗೊಳಪಡಿಸಿ ಸ್ಪಷ್ಟನೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೃಷಿಗೂ ಈ ನೀರು ಯೋಗ್ಯವಲ್ಲ
ಇನ್ನು ಅಂಕೋಲಾದುದ್ದಕ್ಕೂ ಹರಿಯುವ ಗಂಗಾವಳಿ ನದಿ ನೀರನ್ನು ಕೃಷಿ ಮಾತ್ರವಲ್ಲದೆ ಅಗಸೂರಿನಲ್ಲಿ ಒಡ್ಡು ಕಟ್ಟಿ ಕಾರವಾರ ಹಾಗೂ ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆಗೂ ಕುಡಿಯುವ ನೀರು ಪೂರೈಸುತ್ತಾರೆ. ಸದ್ಯ ಈ ಭಾಗಗದಲ್ಲಿ ನೀರು ಉತ್ತಮವಾಗಿಯೇ ಇದೆಯಾದರೂ ಕೆಲ ಭಾಗದಲ್ಲಿ ಮಾತ್ರ ನೀರೆಲ್ಲ ಕಡು ಹಸಿರು ಬಣ್ಣಕ್ಕೆ ತಿರುಗಿ ಪಾಚಿಗಟ್ಟಿಕೊಂಡಿದೆ.
ಈ ಬಗ್ಗೆ ಕಡಲಜೀವ ಶಾಸ್ತ್ರಜ್ಞರನ್ನ ಕೇಳಿದ್ರೆ, ನದಿಗಳ ನೀರು ಸಿಹಿಯಾಗಿರುವುದರಿಂದ ಪಾಚಿ ಬೆಳೆಯುವುದು ಕಡಿಮೆ. ಅಲ್ಲದೆ ಸದಾ ಹರಿಯುತ್ತಿರುತ್ತವೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಅಕಾಲಿಕ ಮಳೆಯಾದ ತೋಟ ಗದ್ದೆಗಳಿಂದ ಬಂದ ಗೊಬ್ಬರ ನದಿಗಳಲ್ಲಿ ಶೇಖರಣೆಯಾಗಿ ಪಾಚಿ ಬೆಳೆದಿರುವ ಸಾಧ್ಯತೆ ಇದೆ. ಆದರೆ ಇದು ಕೊಚ್ಚಿ ಹೋದಲ್ಲಿ ಪಾಚಿ ಕೂಡ ಕಡಿಮೆಯಾಗುತ್ತದೆ. ಆದರೆ ಹೀಗೆ ಹಸಿರುಗಟ್ಟಿದ ಪಾಚಿ ನೀರನ್ನು ಜನ ಜಾನುವಾರುಗಳು ಮಾತ್ರವಲ್ಲದೆ ಕೃಷಿಗೆ ಬಳಸುವುದು ಕೂಡ ಒಳ್ಳೆಯದಲ್ಲ. ಆದರೆ ಇದರಿಂದಲೇ ಚಿಕುನ್ ಗುನ್ಯಾದಂತಹ ರೋಗಗಳು ಬರುತ್ತವೆ ಎಂದು ಹೇಳಲಾಗದು. ನೀರನ್ನು ಪರೀಕ್ಷೆಗೊಳಪಡಿಸಿ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬೇಕಿದೆ ಎನ್ನುತ್ತಾರೆ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ.
ಒಟ್ಟಿನಲ್ಲಿ ಜನರ ದಾಹ ತೀರಿಸುವ ಮತ್ತು ಕೃಷಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಜೀವಜಲವಾಗಿದ್ದ ಗಂಗಾವಳಿ ನದಿ ನೀರು ಹಸಿರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಹರಿಸಿ ಜನರಲ್ಲಿನ ಗೊಂದಲ ಹಾಗೂ ಆತಂಕವನ್ನು ಬಗೆಹರಿಸಬೇಕಿದೆ.