ಶಿರಸಿ: ಸಂಗೀತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಎಲ್ಲರಲ್ಲೂ ಭಾವೈಕ್ಯತೆ ಬೆಳೆಸುವ ಕಲೆ. ಅದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯ ಸಿದ್ದಾಪುರದ ಬಾಲಕಿಯೊಬ್ಬಳು ಅನ್ಯಧರ್ಮಿಯಳಾಗಿದ್ದರೂ ಹಣೆಯಲ್ಲಿ ವಿಭೂತಿ ಹಾಗೂ ಕುಂಕುಮವನ್ನಿಟ್ಟು ಜಾನಪದ ಶೈಲಿಯ ಸೀರೆ, ಕುಪ್ಪುಸ ತೊಟ್ಟು, ಎದುರುಗಡೆ ಬಿಸೋ ಕಲ್ಲನ್ನಿಟ್ಟು ಹಾಡು ಹೇಳುತ್ತಾ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿದ್ದಾಳೆ.
ಈಕೆಯ ಹೆಸರು ರಿಫಾ ತಾಜ್, ಸಿದ್ದಾಪುರ ತಾಲೂಕಿನ ಕಾನಗೋಡಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕಿ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ರಾಜ್ಯ ಹಾಗೂ ಜಿಲ್ಲೆಯನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಮಕ್ಕಳಿಗಾಗಿಯೇ ನಡೆಸುವ ಕಲೋತ್ಸವ ಸ್ಪರ್ಧೆಯಲ್ಲಿ, ಬೀಸೋ ಕಲ್ಲಿನ ಪದ ಅನ್ನೋ ಜಾನಪದ ಪ್ರಕಾರದಲ್ಲಿ ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತನ್ನ ಪ್ರದರ್ಶನವನ್ನು ನೀಡಿದ್ದಾಳೆ. ರಾಷ್ಟ್ರ ಮಟ್ಟದ ಪ್ರದರ್ಶನಗಳು ನಡೆದಿದ್ದು, ಜನವರಿ 22ರ ನಂತರ ಫಲಿತಾಂಶ ಪ್ರಕಟವಾಗಲಿದೆ.