ಭಟ್ಕಳ: ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಗುರುವಾರ ಮುರುಡೇಶ್ವರದಲ್ಲಿರುವ ಅನಧಿಕೃತ ಗೂಡಂಗಡಿ ತೆರವುಗೊಳಿಸಲು ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿಗಳು ವ್ಯಾಪಾರಿಗಳ ವಿರೋಧದ ನಡುವೆಯೂ ತಹಶಿಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.
ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಅನಧಿಕೃತ ಗೂಡಂಗಡಿ ತೆರವು - tourist site Murudeshwar
ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಗುರುವಾರ ಮುರುಡೇಶ್ವರದಲ್ಲಿರುವ ಅನಧಿಕೃತ ಗೂಡಂಗಡಿ ತೆರವುಗೊಳಿಸಲು ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿಗಳು ವ್ಯಾಪಾರಿಗಳ ವಿರೋಧದ ನಡುವೆಯೂ ತಹಶಿಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು.
ಮುರುಡೇಶ್ವರದ ಪುಷ್ಕರಣಿಯ 396/ಅ ಸರ್ವೇ ನಂಬರ್ ಭಾಗದಲ್ಲಿನ ಅನಧಿಕೃತ ಗೂಡಂಗಡಿ ತೆರವು ಮಾಡಲು ಕಂದಾಯ ಇಲಾಖಾಧಿಕಾರಿಗಳು ಸೂಚನೆ ನೀಡಿದ್ದರೂ ಕೂಡ ತೆರವುಗೊಳಿಸದೆ ಇದ್ದುದ್ದರಿಂದ ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ತೆರವುಗೊಳಿಸಲಾಯಿತು. ಗೂಡಂಗಡಿ ಮಾಲೀಕರು ಕೆಲ ಸಮಯ ಗೊಂದಲಮಯ ವಾತಾವರಣ ಏರ್ಪಡಿಸಿ, ಬಳಿಕ ನಾವು 1981ರಿಂದಲೂ ಕಂದಾಯ ಇಲಾಖೆಗೆ ಕಟ್ಟಿಕೊಂಡು ಸಣ್ಣ ಪುಟ್ಟ ಅಂಗಡಿ ಮುಂಗಟ್ಟು ನಡೆಸಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ. ನಾವೇ ಖುದ್ದಾಗಿ ಅಂಗಡಿಗಳನ್ನು ಸ್ಥಳಾಂತರ ಮಾಡುತ್ತೇವೆ. 25 ರಿಂದ 30 ವರ್ಷಗಳ ಹಿಂದಿನಿಂದ ಈ ಅಂಗಡಿಗಳಿಂದ ಜೀವನ ನಿರ್ವಹಿಸುತ್ತಾ ಬಂದಿದ್ದೇವೆ. ರಸ್ತೆ ಅಗಲೀಕರಣಕ್ಕೆ ಎಷ್ಟು ಜಾಗದ ಅವಶ್ಯಕತೆ ಇದೆಯೋ ಅಷ್ಟನ್ನು ಬಿಟ್ಟುಕೊಡುತ್ತೇವೆ ಎಂದು ಪಟ್ಟು ಹಿಡಿದರು.
ಈ ಸಮಯದಲ್ಲಿ ಗೂಡಂಗಡಿಯವರನ್ನ ಉದ್ದೇಶಿಸಿ ಮಾತನಾಡಿದ ತಹಶಿಲ್ದಾರ್ ವಿ.ಪಿ. ಕೊಟ್ರಳ್ಳಿ ಅವರು, ಇದು ಕಂದಾಯ ಇಲಾಖೆಯ ಆಸ್ತಿಯಾಗಿದ್ದು, ರಸ್ತೆಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ತೆರವುಗೊಳಿಸಲು ಭಟ್ಕಳ ಮಾನ್ಯ ಸಹಾಯಕ ಆಯುಕ್ತರು ಹಾಗೂ ಕಾರವಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈಗಾಗಲೇ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಮುರುಡೇಶ್ವರ ಗ್ರಾಮದ ಅಂದವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸರ್ಕಾರದ ಆಸ್ತಿಯನ್ನು ಅತಿಕ್ರಮಣ ಮಾಡಿದ ಗೂಡಂಗಡಿಗಳನ್ನು ನ್ಯಾಯಾಲಯದ ಆದೇಶಕ್ಕೆ ಯಾವುದೇ ತೊಡಕಾಗದೆ, ಹಂತ ಹಂತವಾಗಿ ಎಲ್ಲಾ ಅನಧಿಕೃತ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು.