ಕಾರವಾರ (ಉತ್ತರ ಕನ್ನಡ): ಕರಾವಳಿ ನಗರಿ ಕಾರವಾರ ವಿಶಾಲವಾದ ಕಡಲ ತೀರದಿಂದಲೇ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೇ ಬೀಚ್‌ಗೆ ಹೊಂದಿಕೊಂಡಿರುವ ವಾರ್‌ಶಿಪ್ ಮ್ಯೂಸಿಯಂ, ರಾಕ್ ಗಾರ್ಡನ್, ಅಕ್ವೇರಿಯಂ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದೀಗ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಡಲ ತೀರಕ್ಕೆ ಹೊಸದೊಂದು ಆಕರ್ಷಣೆ ಸೇರ್ಪಡೆಯಾಗುತ್ತಿದೆ.
ಇನ್ಮುಂದೆ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಜೊತೆಗೆ ನೌಕಾನೆಲೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಲು ಯುದ್ಧ ವಿಮಾನ ಸಂಗ್ರಹಾಲಯವೊಂದು ಕಡಲ ತೀರದಲ್ಲಿ ತಲೆ ಎತ್ತಲಿದೆ. 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142M ಯುದ್ಧ ವಿಮಾನವನ್ನು ಟ್ಯಾಗೋರ್ ಕಡಲ ತೀರಕ್ಕೆ ತಂದು ಯುದ್ಧ ವಿಮಾನ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ವೈಜಾಗ್‌ನಲ್ಲಿ ನಿವೃತ್ತಿಯಾಗಿರುವ 4 ಯುದ್ಧ ವಿಮಾನಗಳಲ್ಲಿ ಟುಪೋಲೆವ್ 142M ಯುದ್ಧ ವಿಮಾನವನ್ನು ಕಾರವಾರದ ಕಡಲ ತೀರಲ್ಲಿ ವಸ್ತುಸಂಗ್ರಹಾಲಯ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷವೇ ಬರಬೇಕಿದ್ದ ಯುದ್ಧ ವಿಮಾನ ತಡವಾಗಿ ಆಗಮಿಸುತ್ತಿದ್ದು, ಇದೇ ಮಾರ್ಚ್ ಅಂತ್ಯದ ವೇಳೆಗೆ ಟ್ಯಾಗೋರ್ ಕಡಲ ತೀರದಲ್ಲಿ ಟುಪೋಲೆವ್ ಸ್ಥಾಪನೆಯಾಗಲಿದೆ.