ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರ ಮನೆಬಾಗಿಲಿಗೆ ಔಷಧಿ.. ನಿವೃತ್ತ ಯೋಧನ ಮಹಾನ್ ಕಾರ್ಯ - uttarakannada latest news

ಕೊರೊನಾ ಪಾಸಿಟಿವ್ ಆಗಿ ಮನೆಯಲ್ಲಿರುವ ಸೋಂಕಿತರು ತಮ್ಮ ವರದಿ ಹಾಗೂ ವೈದ್ಯರು ನೀಡಿದ ಔಷಧಗಳ ಚೀಟಿಯನ್ನು ವಾಟ್ಸಾಪ್‌ ಮೂಲಕ ಕಳುಹಿಸಿಕೊಟ್ಟರೇ ಸಾಕು. ಅಗತ್ಯವಿರುವ ಔಷಧಗಳನ್ನು ತಾವೇ ಖರೀದಿಸಿ ಕಾರವಾರದ ಯೋಧ ಉಚಿತವಾಗಿ ಕೊಡುತ್ತಿದ್ದಾರೆ.

retired-soldier-help
ನಿವೃತ್ತ ಯೋಧನ ಮಹಾನ್ ಕಾರ್ಯ

By

Published : May 27, 2021, 8:51 PM IST

ಕಾರವಾರ: ಕೊರೊನಾ ಎರಡನೆ ಅಲೆಯ ಹೊಡೆತಕ್ಕೆ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಲವೆಡೆ ಕೋವಿಡ್ ಸೋಂಕಿಗೊಳಗಾಗಿ ಕುಟುಂಬಗಳೇ ಹೋಂ ಐಸೋಲೇಷನ್‌ಗೆ ಒಳಗಾಗಿದ್ದು, ಅಗತ್ಯ ಔಷಧಗಳನ್ನು ಸಹ ಪಡೆದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಓರ್ವ ನಿವೃತ್ತ ಯೋಧ ಸ್ವಯಂ ಪ್ರೇರಣೆಯಿಂದ ಮನೆಯಲ್ಲಿ ಕ್ವಾರಂಟೈನ್ ಇರುವ ಸೋಂಕಿತರಿಗೆ ಔಷಧಗಳನ್ನು ಉಚಿತವಾಗಿ ತಲುಪಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ನಿವೃತ್ತ ಯೋಧನ ಮಹಾನ್ ಕಾರ್ಯ

ಓದಿ: ತನ್ನನ್ನು ಮದುವೆ ಆಗುವಂತೆ ಶಾರುಖ್ ಖಾನ್ ಪುತ್ರಿಗೆ ಪ್ರಪೋಸಲ್​ ಕಳುಹಿಸಿದ ಯುವಕ!

ಕಳೆದ ಬಾರಿ ಕೊರೊನಾ ನಿರ್ವಹಣೆಯಲ್ಲಿ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿದ್ದ ಉತ್ತರಕನ್ನಡ ಜಿಲ್ಲೆ ಈ ಬಾರಿ ಹೆಚ್ಚು ಸೋಂಕಿತರನ್ನು ಹೊಂದಿದೆ. ಅದರಲ್ಲೂ ಬಹುತೇಕ ಸೋಂಕಿತರು ಆಸ್ಪತ್ರೆಗೆ ದಾಖಲಾಗದೇ ತಮ್ಮ ಮನೆಗಳಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದು, ವೈದ್ಯರಿಂದ ಔಷಧಗಳನ್ನು ಬರೆಸಿಕೊಂಡು ಮೆಡಿಕಲ್‌ಗಳಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಸಾಕಷ್ಟು ಮಂದಿ ಸೋಂಕಿತರಿಗೆ ಸರ್ಕಾರದ ಉಚಿತ ಕೊರೊನಾ ಔಷಧಗಳು ಸಿಗದೇ ಪರದಾಡುವಂತಾಗಿದ್ದು, ಮೆಡಿಕಲ್‌ಗಳಲ್ಲಿ ಹಣ ಕೊಟ್ಟು ಖರೀದಿಸಲಾಗದ ಸ್ಥಿತಿಯಲ್ಲಿದ್ದಾರೆ. ಇದನ್ನರಿತ ಕಾರವಾರ ನಗರದ ನಿವೃತ್ತ ನೌಕಾನೆಲೆ ಯೋಧರೋರ್ವರು ಮನೆಯಲ್ಲಿರುವ ಕೊರೊನಾ ಸೋಂಕಿತರಿಗೆ ಉಚಿತವಾಗಿ ಔಷಧಗಳನ್ನು ಒದಗಿಸುವ ಸೇವೆಯನ್ನು ಮಾಡುತ್ತಿದ್ದಾರೆ. ನಗರದ ಕೆಹೆಚ್‌ಬಿ ನಿವಾಸಿ ವಿ.ಕೆ. ಸಿಂಗ್ ಕಳೆದೊಂದು ತಿಂಗಳಿನಿಂದ ಈ ಸೇವೆಯನ್ನು ಪ್ರಾರಂಭಿಸಿದ್ದು, ವಾಟ್ಸಾಪ್ ಮೂಲಕ ಸಂಪರ್ಕಿಸುವ ಸೋಂಕಿತರಿಗೆ ಅಗತ್ಯವಿರುವ ಔಷಧಗಳನ್ನು ತಾವೇ ಖರೀದಿಸಿ ಮನೆಬಾಗಿಲಿಗೇ ತಲುಪಿಸುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಆಗಿ ಮನೆಯಲ್ಲಿರುವ ಸೋಂಕಿತರು ತಮ್ಮ ವರದಿ ಹಾಗೂ ವೈದ್ಯರು ನೀಡಿದ ಔಷಧಗಳ ಚೀಟಿಯನ್ನು ವಾಟ್ಸಾಪ್‌ ಮೂಲಕ ಕಳುಹಿಸಿಕೊಟ್ಟರೇ ಸಾಕು, ಅಗತ್ಯವಿರುವ ಔಷಧಗಳನ್ನು ತಾವೇ ಖರೀದಿಸಿ ಉಚಿತವಾಗಿ ಕೊಡುತ್ತಿದ್ದಾರೆ. ಮುಖ್ಯವಾಗಿ ಔಷಧಿ ಖರೀದಿಸಲಾಗದಂತಹ ಸಂಕಷ್ಟದಲ್ಲಿರುವ ಶ್ರಮಿಕ ವರ್ಗದವರಿಗಾಗಿ ಈ ಸೇವೆಯನ್ನು ಪ್ರಾರಂಭಿಸಿದ್ದು, ಕೊರೊನಾದ ಈ ಸಂದರ್ಭದಲ್ಲಿ ತೊಂದರೆಯಲ್ಲಿರುವ ಜನರಿಗೆ ತನ್ನ ಕೈಲಾದ ಸೇವೆ ನೀಡಿದ ತೃಪ್ತಿ ಇದೆ ಅಂತಾರೇ ವಿ.ಕೆ ಸಿಂಗ್.

ವಿ.ಕೆ. ಸಿಂಗ್ ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ಪತ್ನಿ ಹಾಗೂ ಮಗಳು ಸಹ ಮನೆಯಲ್ಲಿಯೇ ಇರುವಂತಾಗಿದ್ದು, ಈ ವೇಳೆ ಅವರಿಗೆ ಅಗತ್ಯವಿದ್ದ ಔಷಧಗಳನ್ನು ಆಸ್ಪತ್ರೆಯಿಂದ ಒದಗಿಸಿರಲಿಲ್ಲ. ಹೀಗಾಗಿ ವೈದ್ಯರಿಂದ ಚೀಟಿ ಬರೆಸಿಕೊಂಡು ಪರಿಚಯಸ್ಥರಿಂದ ಔಷಧಗಳನ್ನು ತರಿಸಿಕೊಂಡಿದ್ದರು. ತನ್ನಂತೆ ಇತರೆ ಸೋಂಕಿತರಿಗೂ ಎದುರಾಗಬಹುದಾದ ಕಷ್ಟವನ್ನು ಅವರು ಅರಿತಿದ್ದರು.

ಹೀಗಾಗಿ ಕೊರೊನಾದಿಂದ ಗುಣಮುಖರಾದ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಸೋಂಕಿತರಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ಒದಗಿಸೋದಾಗಿ ಸಂದೇಶ ಹಂಚಿಕೊಂಡಿದ್ದು, ಇದುವರೆಗೆ ಸುಮಾರು 70 ರಿಂದ 80 ಕೊರೊನಾ ಸೋಂಕಿತ ಕುಟುಂಬಗಳಿಗೆ ಔಷಧಗಳನ್ನ ಪೂರೈಸಿದ್ದಾರಂತೆ. ಕೇವಲ ಕಾರವಾರ ಮಾತ್ರವಲ್ಲದೇ ಅಂಕೋಲಾ, ಯಲ್ಲಾಪುರ ಸೇರಿದಂತೆ ಗ್ರಾಮೀಣ ಭಾಗಗಳಿಗೂ ವಿ.ಕೆ.ಸಿಂಗ್ ತೆರಳಿ ಔಷಧ ತಲುಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಅವರ ಪತ್ನಿಯೂ ಸಹ ಬೆಂಬಲಿಸಿದ್ದು, ಪತಿ ಉತ್ತಮ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎನ್ನುತ್ತಾರೆ ಪತ್ನಿ ಅಂಕಿತಾ ಸಿಂಗ್.

ತಮಗೂ ಸಹಾಯ ಬೇಕು ಎಂದಾದರೆ ವಿ.ಕೆ ಸಿಂಗ್ ಅವರ ಮೊಬೈಲ್ ಸಂಖ್ಯೆ 8985201040 ಗೆ ಕರೆ ಮಾಡಿ ವೈದ್ಯರು ಸೂಚಿಸಿದ ಔಷಧಗಳ ಚೀಟಿ ತೋರಿಸಿ ಪಡೆಯಬಹುದಾಗಿದೆ. ಒಟ್ಟಾರೆ ಕೊರೊನಾದಂತಹ ಸಂಕಷ್ಟದ ಈ ಸಂದರ್ಭದಲ್ಲಿ ನಿವೃತ್ತ ನೌಕಾನೆಲೆ ಯೋಧ ವಿ.ಕೆ. ಸಿಂಗ್‌ ಸೋಂಕಿತರಿಗೆ ಮನೆ ಮನೆಗೆ ತೆರಳಿ ಔಷಧಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ. ಸೋಂಕಿತರೆಂದರೆ ಅಶ್ಪೃಶ್ಯರಂತೆ ಕಾಣುವ ಜನರ ನಡುವೆ ಇವರ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ABOUT THE AUTHOR

...view details