ಶಿರಸಿ:ರಾಜ್ಯದಲ್ಲೇ ಪ್ರಸಿದ್ಧಿ ಹೊಂದಿರುವ 400 ವರ್ಷಗಳ ಇತಿಹಾಸವಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸೋಂದೆ ಅರಸರ ಕಾಲದ ರಥವನ್ನು ಈಗ ಬದಲಿಸುವ ಕೆಲಸ ನಡೆಯುತ್ತಿದ್ದು, ಮುಂಬರುವ ಮಾರ್ಚ್ಗೆ ಹೊಸ ರಥದ ನಿರೀಕ್ಷೆ ಭಕ್ತರಿಗಿದೆ.
1608 ರಲ್ಲಿ ಸೋಂದಾ ರಾಮಚಂದ್ರ ನಾಯಕ ಈ ರಥವನ್ನು ಸಿದ್ಧಪಡಿಸಿ ಮಧುಕೇಶ್ವರ ದೇವಾಲಯಕ್ಕೆ ನೀಡಿದ್ದರು. 413 ವರ್ಷಗಳಷ್ಟು ಹಳೆಯದಾದ ಈ ರಥದಲ್ಲಿಯೇ ಪ್ರತಿ ವರ್ಷ ತೇರು ನಡೆಸುತ್ತಾ ಬರಲಾಗಿತ್ತು. ಈಗ ಅದರ ಬದಲಿಗೆ ನವ ರಥ ನಿರ್ಮಾಣ ಮಾಡಲಾಗುತ್ತಿದ್ದು, ಕೋಟೇಶ್ವರದ ಕುಶಲ ಕರ್ಮಿಗಳು ರಥ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರಥದ ಮೂರು ಅಚ್ಚುಗಳು, ನಾಲ್ಕು ಮುಖ್ಯ ಗಾಲಿಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಹಲಸಿನ ಮರ ಬಳಕೆ: ರಥ ನಿರ್ಮಾಣದ ಅಗತ್ಯ ಕಟ್ಟಿಗೆಗಳನ್ನು ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದಾರೆ. ಕರಿ ಮತ್ತಿ ಜಾತಿಯ ಮರಗಳು, ರಂಜಲು ಜಾತಿಯ ಮರಗಳು, ಹೊನ್ನೆ, ಕರಿಮತ್ತಿ, ಹೆಬ್ಬಲಸು ಜಾತಿಯ ಮರಗಳನ್ನು ಭಕ್ತರು ನೀಡಿದ್ದಾರೆ. ರಥದ ಗೊಂಬೆಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗುವಾನಿ, ದೇವರನ್ನು ಕೂಡಿಸುವ ಪೀಠ ಸ್ಥಾಪನೆಗೆ ಹಲಸಿನ ಮರ ಬಳಕೆ ಮಾಡಿಕೊಳ್ಳಲಾಗುತ್ತಿದೆ.