ಕಾರವಾರ:ಕೆಳಮಟ್ಟದಿಂದ ಉತ್ತಮ ನಾಯಕನಾಗಿ ಭಾರತಕ್ಕೆ ಉತ್ಕೃಷ್ಟ ನಾಯಕಾರಿದ್ದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಆ ಮಾದರಿಗೆ ಅವಮಾನಕಾರಿಯಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಟೀಕಿಸಿದರು.
ಕಾರವಾರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕುಂದಾಬಾಯಿ ಪುರಲೇಕರ್ ಪರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಹೊಳೆನರಸಿಪುರದ ಅರಕನಳ್ಳಿಯಲ್ಲಿ ಹುಟ್ಟಿ, ರೈತನ ಮಗನಾಗಿ ಬೆಳೆದು, ಉತ್ತಮ ವಿದ್ಯಾಭ್ಯಾಸ ಮುಗಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಅಧಿಕಾರ ನಿಭಾಯಿಸಿ ಬಳಿಕ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದವರು. ಹೀಗೆ ಕೆಳಮಟ್ಟದಿಂದ ಶ್ರಮಿಸಿ ಎಲ್ಲ ಹುದ್ದೆ ನಿಭಾಯಿಸಿದವರು ಯಾರು ಇಲ್ಲ. ಇದಕ್ಕೆ ದೇಶ, ರಾಷ್ಟ್ರದ ಜನರು ಹೆಮ್ಮೆ ಪಡುವಂತಾಗಿತ್ತು. ಆದರೆ, ದೇವೇಗೌಡರ ಇಂದಿನ ನಡೆಯಿಂದ ಆ ಉತ್ಕೃಷ್ಟ ಮಾದರಿಗೆ ಅವಮಾನ ತರುತ್ತಿದ್ದಾರೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪತ್ರಿಕಾಗೋಷ್ಠಿ ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ನೆರವಾಗಬೇಕಿದ್ದ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ತಾತನಿಂದ,ಅಪ್ಪನಿಂದ ನಮಗೇನು ರಾಜಕೀಯ ಲಾಭವಿದೆ ಎಂದು ನೋಡುತ್ತಿದ್ದಾರೆ. ಇಂತಹ ನೀಚ ರಾಜಕಾರಣಕ್ಕೆ ಅವರ ಕುಟುಂಬ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಇಂದು ಹಣ, ಹೆಂಡದ ಮೂಲಕ ರಾಜಕೀಯ ಮಾಡುತ್ತಿವೆ. ತುಮಕೂರಿನಲ್ಲಿ ನಿನ್ನೆ ಒಂದು ಪಕ್ಷದವರು 3೦೦ ರೂ. ನೀಡಿದರೆ, ಇನ್ನೊಂದು ಪಕ್ಷದವರು 5೦೦ ರೂ. ನೀಡುತ್ತಿದ್ದರು. ಸಾಲದಕ್ಕೆ ಮನೆ ಮನೆಗೆ ಹಸಿ ಮಾಂಸವನ್ನು ಕೊಟ್ಟು ಜಾತಿ, ಹಣ ಹಾಗೂ ಮಾಂಸದ ರಾಜಕಾರಣ ಮಾಡಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ 23 ವರ್ಷಗಳ ಕಾಲ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಏನೂ ಮಾಡಿಲ್ಲ. ಬಹುಮುಖ್ಯವಾಗಿ ಅಡಿಕೆಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಇವರು ಯಾವುದೇ ಪ್ರಯತ್ನ ನಡೆಸಿಲ್ಲ. ಜಿಲ್ಲೆಯ ಮೀನುಗಾರರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಣ್ಣೆತ್ತಿಯೂ ನೋಡಿಲ್ಲ. ಇಂತವರನ್ನು ಆರಿಸುವ ಬದಲು ಜನಸಾಮಾನ್ಯರಿಗಾಗಿ ದುಡಿಯುವವರನ್ನು ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.
ದೇಶಪಾಂಡೆ ಅವರು ಜಿಲ್ಲೆಯ ಪ್ರಮುಖ ರಾಜಕಾರಣಿ. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅವರಿಗೊಂದು ಖಾತೆ ನೀಡಲಾಗುತ್ತದೆ. ಆದರೆ, ಇಂತವರು ತಮ್ಮ ಸ್ವಆಸ್ತಿ ಮಾಡಿಕೊಳ್ಳುವುದರಲ್ಲಿಯೇ ನಿರತರಾಗಿದ್ದಾರೆ ವಿನಃ ಜಿಲ್ಲೆಗೆ ಏನೂ ಮಾಡಿಲ್ಲ. ಆದ್ದರಿಂದ ನಮ್ಮ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕುಂದಾಬಾಯಿ ಪುರುಳೇಕರ್ ಅವರಿಗೆ ಈ ಬಾರಿ ತಮ್ಮ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.