ಕಾರವಾರ:ಗೋವಾದಿಂದ ತಂದ ಅಕ್ರಮ ಮದ್ಯ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಗಸ್ತಿನಲ್ಲಿದ್ದ ಕರಾವಳಿ ಕಾವಲು ಪಡೆ ಪೊಲೀಸರು ಪುಟ್ಟ ಕಾಡುಕುರಿಯೊಂದನ್ನು ರಕ್ಷಣೆ ಮಾಡಿರುವ ಘಟನೆ ಅಂಕೊಲಾ ತಾಲೂಕಿನ ಹಾರವಾಡದ ಕೋಡಾರ ಗುಡ್ಡದ ಬಳಿಯ ಸಮುದ್ರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಎಣ್ಣೆ ಪತ್ತೆ ಹಚ್ಚಲು ಹೋದ ಕರಾವಳಿ ಪೊಲೀಸರಿಂದ ಅಪರೂಪದ ಕಾಡುಕುರಿ ರಕ್ಷಣೆ - Harvada of Angola Taluk
ಕರಾವಳಿ ಕಾವಲು ಪಡೆ ಪೊಲೀಸರು ಕಾಡುಕುರಿಯೊಂದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದ ಘಟನೆ ಅಂಕೊಲಾ ತಾಲೂಕಿನ ಹಾರವಾಡದ ಕೋಡಾರ ಗುಡ್ಡದ ಬಳಿಯ ಸಮುದ್ರದಲ್ಲಿ ನಡೆದಿದೆ.

ಲಾಕ್ ಡೌನ್ ಹಿನ್ನೆಲೆ ಗೋವಾದಿಂದ ಸಮುದ್ರ ಮಾರ್ಗದ ಮೂಲಕ ಅಕ್ರಮ ಮದ್ಯ ಸಾಗಾಟವಾಗುವ ಹಿನ್ನೆಲೆ ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಎಸ್. ಆರ್. ನೇತೃತ್ವದ ತಂಡ ಗಸ್ತು ತಿರುಗಾಟ ನಡೆಸಿತ್ತು. ಆದರೆ, ಗೋವಾದಿಂದ ಬರುವಾಗ ಕೋಡಾರ ಗುಡ್ಡದ ಬಳಿ ಏನೋ ಹೊಳೆಯುತ್ತಿದ್ದಂತೆ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಪುಟ್ಟ ಕಾಡುಕುರಿ ಮರಿ ಕಣ್ಣಿಗೆ ಬಿದ್ದಿದ್ದು, ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ.
ಬಳಿಕ ಪೊಲೀಸರು ಕಾಡುಕುರಿಮರಿಯನ್ನು ಬೆಲಿಕೇರಿ ಬಳಿಯ ಕರಾವಳಿ ಕಾವಲು ಪಡೆಯ ಕಚೇರಿಗೆ ತಂದು ಆರೈಕೆ ಮಾಡಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಹಸ್ತಾಂತರಿಸಲಾಗಿದೆ. ಯಾವುದೋ ಪ್ರಾಣಿ ದಾಳಿಯಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿರುವ ಸಾಧ್ಯತೆ ಇದ್ದು ರಕ್ಷಣೆ ಮಾಡಲಾಗಿದೆ. ನಾಳೆ ಬೆಳಗ್ಗೆ ಅದನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಆರ್ಎಫ್ಓ ವಿ.ಪಿ ನಾಯ್ಕ ತಿಳಿಸಿದ್ದಾರೆ.