ಕಾರವಾರ:ಹೊನ್ನಾವರ ತಾಲೂಕಿನ ವಂದೂರು ಜಡ್ಡಿಗದ್ದೆಯಲ್ಲಿ ಕಳೆದ 3-4 ತಿಂಗಳಿನಿಂದ ಹಸುಗಳನ್ನು ಭಕ್ಷಿಸುತ್ತಿದ್ದ ಕರಿ ಚಿರತೆಯೊಂದನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊನ್ನಾವರ ತಾಲೂಕಿನ ಸಾಲ್ಕೋಡ–ಅರೇಂಗಡಿ, ವಂದೂರು ಭಾಗಗಳಲ್ಲಿ ನಿರಂತರವಾಗಿ ಗುಡ್ಡಕ್ಕೆ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿದ್ದವು. ಕಡ್ಲೆ, ದುಗ್ಗೂರ, ವಂದೂರು ಗುಡ್ಡದ ಭಾಗದಲ್ಲಿಯೂ ಅನೇಕ ಹಸುಗಳು ಗುಡ್ಡಕ್ಕೆ ಬಿಟ್ಟಾಗ ಕಣ್ಮರೆ ಆಗುತ್ತಿರುವುದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಆದರೆ ಚಿರತೆ ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.
ಅರಣ್ಯ ಅಧಿಕಾರಿಗಳು ಚಿರತೆ ಕೊಂದು ಹಾಕಿದ ಆಕಳುಗಳ ಸನಿಹದಲ್ಲಿಯೇ ಬೋನು ಇಟ್ಟರೂ ಕರಿ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಆದರೆ ಕಳೆದ ದಿನ ಕೊನೆಗೂ ಕರಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಇದರೊಂದಿಗೆ ಅರಣ್ಯ ಅಧಿಕಾರಿಗಳು ಚಿರತೆ ಬಂಧಿಸಲು ಮಾಡಿದ ತಂತ್ರ ಯಶಸ್ವಿಯಾಗಿದೆ.
ಚಿರತೆಗೆ ಸುಮಾರು 4 ವರ್ಷವಾಗಿದ್ದು, ಇದು ಗಂಡು ಚಿರತೆಯೋ, ಹೆಣ್ಣು ಚೆರತೆಯೋ ಎಂಬುದು ಸ್ಪಷ್ಟವಾಗಿಲ್ಲ. ಚಿರತೆ ಆರೋಗ್ಯವಾಗಿದ್ದು, ಅದನ್ನು ರಾತ್ರಿ ಸ್ಥಳಾಂತರಿಸಲಾಗಿತ್ತು. ಕರಿ ಚಿರತೆಯೊಂದು ಮುಗ್ವಾ ಗ್ರಾಮದ ಮೂರಕಟ್ಟೆ ಭಾಗದ ಡಿಎಫ್ಒ ಕಚೇರಿಯ ಹಿಂದುಗಡೆ ಸುತ್ತಾಡುತ್ತಿರುವ ಬಗ್ಗೆ ಹಲವರು ಅರಣ್ಯ ಇಲಾಖೆಗೆ 1 ವರ್ಷದ ಹಿಂದೆ ಮಾಹಿತಿ ನೀಡಿದ್ದರು. ಆದರೆ ಚಿರತೆ ಪತ್ತೆಯಾಗಿರಲಿಲ್ಲ. ಡಿಎಫ್ಒ ಕಚೇರಿ ಸನಿಹದಲ್ಲಿ ಓಡಾಡುತ್ತಿದ್ದ ಚಿರತೆಯೇ ಈ ಕರಿ ಚಿರತೆ ಇರಬಹುದೆಂದು ಅಂದಾಜಿಸಲಾಗಿದೆ.