ಕಾರವಾರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಕವಿ ಮತ್ತು ಲೇಖಕ ಡಾ.ಬಾಬಾಸಾಹೇಬ್ ಅಹಮದ್ ಸಾಹೇಬ್ ಸನದಿ (86)ಕುಮಟಾದ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳಿದಿದ್ದಾರೆ.
ಬಹುಭಾಷಾ ಹಾಗೂ ನಾಡಿನ ಹೆಸರಾಂತ ಕವಿಯಾಗಿರುವ ಅವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಕುಮಟಾ ಹೆರವಟ್ಟಾದ ನಿವಾಸದಿಂದ ಬೆಳಗಾವಿ ಸಿಂದೊಳ್ಳಿಯ ಮೂಲನಿವಾಸಕ್ಕೆ ಮೃತ ದೇಹವನ್ನು ಕೊಂಡೊಯ್ಯಲಿದ್ದಾರೆ. ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಶಿಂಧೊಳ್ಳಿಯಲ್ಲಿ 18 ಅಗಸ್ಟ್ 1933ರಂದು ಸಾಹೇಬ್ ಸನದಿ ಜನಿಸಿದ್ದರು. ಬಹುಭಾಷಾ ಕವಿಯಾಗಿದ್ದ ಸನದಿ, ತಮ್ಮ ಜೀವಮಾನದ ಬಹುತೇಕ ಕಾಲವನ್ನು ಕರ್ನಾಟಕದಿಂದ ಹೊರಗೇ ಕಳೆದಿದ್ದಾರೆ. ಇಷ್ಟಾದರೂ ಕನ್ನಡಕ್ಕೆ ಅವರ ಕೊಡುಗೆ ಅಪಾರವಾದದು. ಇವರ ಆಶಾಕಿರಣ, ನೆಲಸಂಪಿಗೆ, ತಾಜಮಹಲು, ಹಿಮಗಿರಿಯ ಮುಡಿಯಲಿ, ವೀರ ಕಂಕಣ, ಧ್ರುವಬಿಂದು ಸೇರಿದಂತೆ ಹಲವಾರು ಕವನ ಸಂಕಲನಗಳು ಕನ್ನಡದಲ್ಲಿ ಹೆಸರು ಮಾಡಿವೆ.
ಸನದಿ ಅವರು ಕವಿಯಾಗಿ, ಕತೆಗಾರರಾಗಿ, ನಾಟಕಕಾರ ಹಾಗೂ ಅಪ್ರತಿಮ ವಾಗ್ಮಿಯಾಗಿ ಕನ್ನಡದ ಕಂಪನ್ನು ಬಹುಭಾಷಿಕರಿಗೆ ಬಿತ್ತರಿಸಿದವರು. ಅವರ ಕನ್ನಡ ಸಾಹಿತ್ಯದ ಸೇವೆಯನ್ನು ಪರಿಗಣಿಸಿದ ಕರ್ನಾಟಕ ವಿಶ್ವವಿದ್ಯಾಲಯ 2005ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪಂಪ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಭಾರತ ಸರಕಾರದ ಪ್ರಶಸ್ತಿ, ಭೂಸನೂರಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗಳು ಅವರಿಗೆ ಲಭಿಸಿದೆ.